ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದ ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ಯಹೂದಿ ಸಮುದಾಯದವರ ಮೇಲೆ ನಡೆದ ಭೀಕರ ಗುಂಡಿನ ದಾಳಿಯ ಘಟನೆಗೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ. ಈ ದಾಳಿಯನ್ನು ನಡೆಸಿದ ಇಬ್ಬರು ಬಂದೂಕುಧಾರಿಗಳು ತಂದೆ ಮತ್ತು ಮಗ ಎಂದು ಪೊಲೀಸರು ದೃಢಪಡಿಸಿದ್ದು, ಇಬ್ಬರೂ ಭಾರತೀಯ ಮೂಲದವರು ಎಂದು ತಿಳಿದುಬಂದಿದೆ.
ಈ ದಾಳಿಯಲ್ಲಿ 16 ಜನರು ಸಾವನ್ನಪ್ಪಿದ್ದಾರೆ. ದಾಳಿಯ ಸೂತ್ರಧಾರ ಎಂದು ಹೇಳಲಾದ 50 ವರ್ಷದ ಸಾಜಿದ್ ಅಕ್ರಂ ಎಂಬಾತನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಆತನ 24 ವರ್ಷದ ಮಗ ನವೀದ್ ಅಕ್ರಂ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಸ್ಟ್ರೇಲಿಯನ್ ತನಿಖಾಧಿಕಾರಿಗಳು ಈ ದಾಳಿಯನ್ನು ಇಸ್ಲಾಮಿಕ್ ಸ್ಟೇಟ್ಸ್ (ಐಸಿಸ್) ಗುಂಪಿನಿಂದ ಪ್ರೇರಿತವಾದ ಭಯೋತ್ಪಾದಕ ಕೃತ್ಯ ಎಂದು ಬಣ್ಣಿಸಿದ್ದಾರೆ.
ಹತ್ಯೆಗೀಡಾದ ಸಾಜಿದ್ ಅಕ್ರಂ ಮೂಲತಃ ಭಾರತದ ಹೈದರಾಬಾದ್‌ನವನು ಎಂದು ಮಾಧ್ಯಮಗಳು ವರದಿ ಮಾಡಿವೆ. ತೆಲಂಗಾಣ ಪೊಲೀಸ್ ಮಹಾನಿರ್ದೇಶಕರು ನೀಡಿದ ಮಾಹಿತಿಯ ಪ್ರಕಾರ, ಸಾಜಿದ್ ಅಕ್ರಂ 1998ರ ನವೆಂಬರ್‌ನಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದ. ವಲಸೆ ಹೋಗುವ ಮುನ್ನ ಹೈದರಾಬಾದ್‌ನಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್ ಪದವಿಯನ್ನು ಪೂರ್ಣಗೊಳಿಸಿದ್ದ.
ಅಕ್ರಂ ಸುಮಾರು 27 ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರೂ, ದಾಳಿಯ ಸಂದರ್ಭದಲ್ಲಿಯೂ ಆತ ಭಾರತದ ಪಾಸ್‌ಪೋರ್ಟ್ ಅನ್ನು ಹೊಂದಿದ್ದ ಎಂಬುದು ಗಮನಾರ್ಹ. ಆತ ಕೊನೆಯ ಬಾರಿಗೆ 2022 ರಲ್ಲಿ ಹೈದರಾಬಾದ್‌ಗೆ ಭೇಟಿ ನೀಡಿದ್ದ ಎನ್ನಲಾಗಿದೆ.
ಅಕ್ರಂ ಆಸ್ಟ್ರೇಲಿಯಾಕ್ಕೆ ವಲಸೆ ಬಂದ ನಂತರ ಯುರೋಪಿಯನ್ ಮೂಲದ ವೆನೆರಾ ಗ್ರೊಸೊ ಎಂಬ ಮಹಿಳೆಯನ್ನು ವಿವಾಹವಾಗಿದ್ದ. ಅವರಿಗೆ ಓರ್ವ ಮಗ ಮತ್ತು ಒಬ್ಬಳು ಮಗಳಿದ್ದು, ಅವರು ಆಸ್ಟ್ರೇಲಿಯಾದ ಪ್ರಜೆಗಳಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕೌಟುಂಬಿಕ ಕಲಹಗಳಿಂದಾಗಿ ಹೈದರಾಬಾದ್‌ನಲ್ಲಿರುವ ತನ್ನ ಕುಟುಂಬದೊಂದಿಗೆ ಅಕ್ರಂ ಸಂಬಂಧ ಕಡಿದುಕೊಂಡಿದ್ದ. 2017ರಲ್ಲಿ ತನ್ನ ತಂದೆ ತೀರಿಕೊಂಡಾಗಲೂ ಆತ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. ಆದರೆ, ಅಕ್ರಂ ತನ್ನ ಜೀವನದಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದ ಅಥವಾ ಭಾರತದಲ್ಲಿ ಉಗ್ರ ಕೃತ್ಯ ಎಸಗುವಂತಹ ಯಾವುದೇ ಕಾರ್ಯಾಚರಣೆಯ ಬಗ್ಗೆ ಈ ಹಿಂದೆ ಯಾವುದೇ ಸುಳಿವು ಅಥವಾ ಅನುಮಾನ ಇರಲಿಲ್ಲ ಎಂದು ತೆಲಂಗಾಣದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಭಯೋತ್ಪಾದಕ ಕೃತ್ಯದ ಹಿಂದಿನ ನಿಖರ ಉದ್ದೇಶ ಮತ್ತು ನಂಟಿನ ಕುರಿತು ಆಸ್ಟ್ರೇಲಿಯನ್ ತನಿಖಾಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

