ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಜಿಪ್ಟ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.
ಈ ವೇಳೆ ಹಲವು ಒಪ್ಪಂದಗಳಿಗೆ ಅಂತಿಮ ರೂಪ ಸಿಕ್ಕಿದೆ.
ಭಾರತ, ಈಜಿಪ್ಟ್ ಸಂಬಂಧ ಮೊದಲಿನಿಂದ ಉತ್ತಮವಾಗಿದೆ. ಎರಡೂ ದೇಶದ ಮಧ್ಯೆ ಸಾವಿರಾರು ವರ್ಷದಿಂದ ವ್ಯಾಪಾರ ಹಾಗೂ ವಹಿವಾಟು ನಡೆಯುತ್ತಿದೆ. ಅದರಲ್ಲೂ ಆಧುನಿಕ ಕಾಲಘಟ್ಟದಲ್ಲಿ ಎರಡೂ ದೇಶಗಳ ವ್ಯಾವಹಾರಿಕ ಸಂಬಂಧ ಉತ್ತಮವಾಗಿದೆ. ಇದೇ ಕಾರಣಕ್ಕೆ ಬಂಡವಾಳ ಹೂಡಿಕೆ, ನವೀಕರಿಸಬಹುದಾದ ಇಂಧನ ಮತ್ತು ಐಟಿ, ಡಿಜಿಟಲ್ ಪಾವತಿಯು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಎರಡೂ ದೇಶಗಳ ನಾಯಕರು ಸಹಿ ಹಾಕಿದರು.
26 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ!
1997ರ ನಂತರ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ. ಅತ್ತ ಅಮೆರಿಕ ಅಧ್ಯಕ್ಷ ಬೈಡನ್ ಮತ್ತು ಅಮೆರಿಕ ಪ್ರಥಮ ಮಹಿಳೆ ಜಿಲ್ ಬೈಡೆನ್ ಆಹ್ವಾನದ ಹಿನ್ನೆಲೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ಭೇಟಿ ಮುಗಿಸಿ ನೇರ ಈಜಿಪ್ಟ್‌ಗೆ ತೆರಳಿದ್ದಾರೆ.
ಈ ವೇಳೆ ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಹುತಾತ್ಮರಾದ 4,000 ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲು, ಕೈರೋದ ಎಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧ ಸ್ಮಾರಕಕ್ಕೆ ಕೂಡ ಪ್ರಧಾನಿ ಮೋದಿ ತೆರಳಲಿದ್ದಾರೆ.