ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಸಂಭ್ರಮದ ನಡುವೆಯೇ ಜರ್ಮನಿಯಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರು ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ತೆಲಂಗಾಣ ಮೂಲದ 25 ವರ್ಷದ ಹೃತಿಕ್ ರೆಡ್ಡಿ ಎಂಬ ವಿದ್ಯಾರ್ಥಿ ಬೆಂಕಿ ಅವಘಡದಿಂದ ಸಾವನ್ನಪ್ಪಿದ್ದು, ಸಂಕ್ರಾಂತಿ ಹಬ್ಬಕ್ಕೆ ಮಗ ಮನೆಗೆ ಬರಲಿದ್ದಾನೆ ಎಂಬ ನಿರೀಕ್ಷೆಯಲ್ಲಿದ್ದ ಕುಟುಂಬಸ್ಥರಲ್ಲಿ ತೀವ್ರ ಶೋಕ ಆವರಿಸಿದೆ.
ಬರ್ಲಿನ್‌ನಲ್ಲಿ ಹೃತಿಕ್ ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಮತ್ತು ದಟ್ಟ ಹೊಗೆ ಹರಡಿದ ಪರಿಣಾಮ, ಪ್ರಾಣ ಉಳಿಸಿಕೊಳ್ಳಲು ಅವರು ಮೇಲ್ಮಹಡಿಯಿಂದ ಕೆಳಕ್ಕೆ ಹಾರಿದ್ದಾರೆ ಎನ್ನಲಾಗಿದೆ. ಈ ವೇಳೆ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಪ್ರಸ್ತುತ, ಕುಟುಂಬಸ್ಥರು ಮತ್ತು ಸ್ನೇಹಿತರು ವಿದೇಶಾಂಗ ಸಚಿವಾಲಯ ಹಾಗೂ ಜರ್ಮನಿಯಲ್ಲಿನ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ಮೃತದೇಹವನ್ನು ತವರಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

