ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಆಸೀಸ್ ವಿರುದ್ಧ ಗೆದ್ದು ಸಂಭ್ರಮಿಸಿದ ಭಾರತ ಮಹಿಳಾ ತಂಡ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಎದುರು ಚೊಚ್ಚಲ ಬಾರಿಗೆ ಟೆಸ್ಟ್ ಸರಣಿ ಜಯಿಸುವಲ್ಲಿ ಯಶಸ್ವಿಯಾಗಿದೆ.

ವಾಂಖೇಡೆ ಮೈದಾನದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಎರಡನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 376 ರನ್‌ ಗಳಿಸಿದ್ದ ಭಾರತ, ಶನಿವಾರ 404 ರನ್‌ಗೆ ಆಲೌಟಾಯಿತು. 8ನೇ ವಿಕೆಟ್‌ಗೆ ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕರ್‌ 122 ರನ್‌ ಜೊತೆಯಾಟವಾಡಿದರು. ದೀಪ್ತಿ ಶರ್ಮಾ 78ಕ್ಕೆ ನಿರ್ಗಮಿಸಿದರೆ, ಪೂಜಾ ವಸ್ತ್ರಾಕರ್‌ 47 ರನ್‌ ಗಳಿಸಿ ಔಟಾದರು.

2ನೇ ಇನ್ನಿಂಗ್ಸ್‌ ಆರಂಭಿಸಿದ ಆಸೀಸ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ಬೆಥ್‌ ಮೂನಿ(33), ಲಿಚ್‌ಫೀಲ್ಡ್‌(18) ಬೇಗನೇ ಔಟಾದರೂ, 3ನೇ ವಿಕೆಟ್‌ಗೆ ಎಲೈಸಿ ಪೆರ್ರಿ ಹಾಗೂ ತಹಿಲಾ ಮೆಗ್ರಾಥ್‌ 84 ರನ್‌ ಜೊತೆಯಾಟವಾಡಿ ತಂಡವನ್ನು ಮೇಲೆತ್ತಿದರು. 45 ರನ್‌ ಗಳಿಸಿದ್ದ ಪೆರ್ರಿಗೆ ಸ್ನೇಹಾ ರಾಣಾ ಪೆವಿಲಿಯನ್ ಹಾದಿ ತೋರಿದರೆ, ಮೆಗ್ರಾಥ್‌(73) ಅವರನ್ನು ನಾಯಕಿ ಹರ್ಮನ್‌ಪ್ರೀತ್‌ ಔಟ್‌ ಮಾಡಿದರು. ಬಳಿಕ ಬಂದ ಅಲೀಸಾ ಹೀಲಿ(32) ಕೂಡಾ ಹರ್ಮನ್‌ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದು ನಿರ್ಗಮಿಸಿದರು. 3ನೇ ದಿನದಂತ್ಯಕ್ಕೆ ಆಸೀಸ್‌ 5 ವಿಕೆಟ್‌ಗೆ 233 ರನ್‌ ಗಳಿಸಿತ್ತು. ನಾಲ್ಕನೇ ದಿನದಾಟದಲ್ಲಿ ಕಾಂಗರೂ ಪಡೆ ತನ್ನ ಖಾತೆಗೆ ಕೇವಲ 27 ರನ್ ಸೇರಿಸಿ 261 ರನ್‌ಗಳಿಗೆ ಸರ್ವಪತನ ಕಂಡಿತು.

ಆಸೀಸ್ ಎದುರು ಚೊಚ್ಚಲ ಟೆಸ್ಟ್ ಗೆಲ್ಲಲು ಭಾರತ ಕೇವಲ 75 ರನ್ ಗುರಿ ಪಡೆಯಿತು. ಶಫಾಲಿ ವರ್ಮಾ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರಾದರೂ, ನಾಲ್ಕನೇ ಎಸೆತದಲ್ಲಿ ಕಿಮ್ ಗರ್ತ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಇನ್ನು ರಿಚಾ ಘೋಷ್ ಕೂಡಾ 13 ರನ್ ಗಳಿಸಿ ಆಶ್ಲೆ ಗಾರ್ಡ್ನರ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಸ್ಮೃತಿ ಮಂಧನಾ(38) ಹಾಗೂ ಜೆಮಿಯಾ ರೋಡ್ರಿಗ್ಸ್‌(12) ಯಾವುದೇ ಅಪಾಯವಿಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇನ್ನು ಆಸೀಸ್ ಎದುರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಮಹಿಳಾ ತಂಡವು ಚೊಚ್ಚಲ ಟೆಸ್ಟ್ ಗೆಲುವು ಸಾಧಿಸುತ್ತಿದ್ದಂತೆಯೇ ಮೈದಾನದಲ್ಲಿ ವಂದೇ ಮಾತರಂ ಹಾಡು ಇಡೀ ಮೈದಾನದಾದ್ಯಂತ ಮೊಳಗಿತು. ಭಾರತೀಯ ಅಭಿಮಾನಿಗಳು ಸಂಭ್ರಮಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!