ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) ಅಧಿವೇಶನದಲ್ಲಿ ಭಾರತವು ಪಾಕಿಸ್ತಾನಕ್ಕೆ ತಕ್ಕ ರಾಜತಾಂತ್ರಿಕ ಪ್ರತ್ಯುತ್ತರ ನೀಡಿದೆ. ಕಾಶ್ಮೀರದ ಪಹಲ್ಗಾಮ್ ಭೀಕರ ಉಗ್ರ ದಾಳಿಯಲ್ಲಿ 26 ಭಾರತೀಯರು ಮೃತಪಟ್ಟ ಹಿನ್ನೆಲೆಯಲ್ಲಿ, ಭಾರತವು 1960 ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಇದನ್ನು ವಿಶ್ವಸಂಸ್ಥೆಯಲ್ಲಿ ಪ್ರಶ್ನಿಸಲು ಬಂದ ಪಾಕ್ ಪ್ರತಿನಿಧಿಗಳಿಗೆ ಭಾರತದ ಪ್ರಥಮ ಕಾರ್ಯದರ್ಶಿ ಅನುಪಮಾ ಸಿಂಗ್ ಖಡಕ್ ಉತ್ತರ ನೀಡಿದ್ದಾರೆ.
ಭಾರತದ ರಾಜತಾಂತ್ರಿಕ ಪೆಟ್ಟು
ಒಂದೆಡೆ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪೋಷಿಸುತ್ತಾ, ಇನ್ನೊಂದೆಡೆ ನೀರು ಹಂಚಿಕೆ ಒಪ್ಪಂದದ ಲಾಭ ಪಡೆಯಲು ಯತ್ನಿಸುವ ಪಾಕಿಸ್ತಾನದ ದ್ವಂದ್ವ ನೀತಿಯನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ. 66 ವರ್ಷಗಳಷ್ಟು ಹಳೆಯದಾದ ಈ ಒಪ್ಪಂದ ಇಂದಿನ ಪರಿಸ್ಥಿತಿಗೆ ಸಂಪೂರ್ಣ ಅಪ್ರಸ್ತುತ ಎಂದು ಭಾರತ ಘೋಷಿಸಿದೆ.
ಪಾಕಿಸ್ತಾನಕ್ಕೆ ಜಲ ಕಂಟಕ
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಪಾಕಿಸ್ತಾನವು ತನ್ನ ದೇಶದ ಒಟ್ಟು ಕೃಷಿಯ ಶೇ. 80 ರಷ್ಟು ಹಾಗೂ ಕುಡಿಯುವ ನೀರಿನ ಶೇ. 93 ರಷ್ಟು ಅಗತ್ಯಕ್ಕೆ ಇದೇ ಸಿಂಧೂ ನದಿಯನ್ನು ಅವಲಂಬಿಸಿದೆ. ಭಾರತದ ಈ ಕಠಿಣ ನಿಲುವಿನಿಂದಾಗಿ ನೆರೆರಾಷ್ಟ್ರ ಆರ್ಥಿಕ ಹಾಗೂ ಸಾಮಾಜಿಕವಾಗಿ ತತ್ತರಿಸುವ ಆತಂಕ ಎದುರಾಗಿದೆ.
‘ಫ್ರಾಂಕೆನ್‌ಸ್ಟೈನ್ ಸ್ಟೇಟ್’ ಪಾಕಿಸ್ತಾನ
ಪಾಕಿಸ್ತಾನವನ್ನು ‘ಫ್ರಾಂಕೆನ್‌ಸ್ಟೈನ್ ಸ್ಟೇಟ್’ (ತಾನೇ ಸೃಷ್ಟಿಸಿದ ರಾಕ್ಷಸನಿಗೆ ಬಲಿಯಾಗುವ ದೇಶ) ಎಂದು ಕರೆದ ಅನುಪಮಾ ಸಿಂಗ್, ಸ್ವತಃ ಸಾಕಿ ಬೆಳೆಸಿದ ಉಗ್ರರೇ ಈಗ ಪಾಕ್ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದರು. ಅವರದೇ ರಕ್ಷಣಾ ಸಚಿವರು ಉಗ್ರರ ತರಬೇತಿಯನ್ನು ಹೆಮ್ಮೆಯಿಂದ ಒಪ್ಪಿಕೊಳ್ಳುವಾಗ, ಜಗತ್ತಿನೆದುರು ಆಶ್ಚರ್ಯದ ನಾಟಕವಾಡುವುದು ನಿಲ್ಲಬೇಕು ಎಂದು ಛೀಮಾರಿ ಹಾಕಿದ್ದಾರೆ.



