ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ರಕ್ಷಣಾ ರಫ್ತು (Defence Export) ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು,2022-23ನೇ ಸಾಲಿನಲ್ಲಿ 15,920 ಕೋಟಿ ರೂ ಮೌಲ್ಯದ ರಕ್ಷಣಾ ಪರಿಕರಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಶನಿವಾರ ತಿಳಿಸಿದ್ದಾರೆ.
ಭಾರತ 15,920 ಕೋಟಿ ರೂ. ಮೌಲ್ಯದ ರಕ್ಷಣಾ ಸಲಕರಣೆಗಳ ರಫ್ತು ಗಮನಾರ್ಹ ಸಾಧನೆ ಎಂದು ಬಣ್ಣಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ‘ಸ್ಫೂರ್ತಿದಾಯಕ ನಾಯಕತ್ವ’ದಲ್ಲಿ ದೇಶದ ರಕ್ಷಣಾ ರಫ್ತುಗಳು ಗಮನಾರ್ಹವಾಗಿ ಹೆಚ್ಚಾಗುತ್ತಾ ಇರಲಿವೆ ಎಂದು ಅವರು ಹೇಳಿದ್ದಾರೆ. ಅಧಿಕೃತ ದತ್ತಾಂಶಗಳ ಪ್ರಕಾರ 2021-22ರಲ್ಲಿ ದೇಶದ ರಕ್ಷಣಾ ರಫ್ತು 12,814 ಕೋಟಿ ಆಗಿತ್ತು.
2020-21ರಲ್ಲಿ ಭಾರತವು 8,434 ಕೋಟಿ ರೂ. ಮೌಲ್ಯದ ಮಿಲಿಟರಿ ಹಾರ್ಡ್ವೇರ್ ರಫ್ತು ಮಾಡಿತ್ತು. ಇದು 2019-20ರಲ್ಲಿ 9,115 ಕೋಟಿ ರೂ, 2018-19ರಲ್ಲಿ 10,745 ಕೋಟಿ ರೂ, 2017-18ರಲ್ಲಿ 4,682 ಕೋಟಿ ರೂ, 2016-17ರಲ್ಲಿ 1,521 ಕೋಟಿ ರೂ. ಆಗಿತ್ತು.2024-25ರ ವೇಳೆಗೆ 35,000 ಕೋಟಿ ರೂ. ಮೌಲ್ಯದ ಮಿಲಿಟರಿ ಹಾರ್ಡ್ವೇರ್ ರಫ್ತು ಮಾಡುವ ಗುರಿಯನ್ನು ಭಾರತ ಹಾಕಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.‘ಅತ್ಯುತ್ತಮ! ‘ಮೇಕ್ ಇನ್ ಇಂಡಿಯಾ’ ಕಡೆಗೆ ಭಾರತದ ಪ್ರತಿಭೆಗಳ ಸ್ಪಷ್ಟ ಅಭಿವ್ಯಕ್ತಿ ಮತ್ತು ಉತ್ಸಾಹ ಇದರಿಂದ ಕಂಡುಬರುತ್ತದೆ. ಕಳೆದ ಕೆಲವು ವರ್ಷಗಳಿಂದ ರಕ್ಷಣಾ ವಲಯದಲ್ಲಿನ ಸುಧಾರಣೆಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತಿರುವುದನ್ನು ಇದು ತೋರಿಸಿದೆ. ಭಾರತವನ್ನು ರಕ್ಷಣಾ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಪ್ರಯತ್ನಗಳಿಗೆ ನಮ್ಮ ಸರ್ಕಾರ ಬೆಂಬಲ ನೀಡುತ್ತಲೇ ಇದೆ’ ಎಂದು ಉಲ್ಲೇಖಿಸಿದ್ದಾರೆ.
Excellent! A clear manifestation of India’s talent and the enthusiasm towards ‘Make in India.’ It also shows the reforms in this sector over the last few years are delivering good results. Our Government will keep supporting efforts to make India a defence production hub. https://t.co/AL3sLknFOL
— Narendra Modi (@narendramodi) April 1, 2023