ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನದಲ್ಲಿ ಸಂಭವಿಸಿದ 6.0 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ಈವರೆಗೆ 800 ಮಂದಿ ಬಲಿಯಾಗಿದ್ದು, 2000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಜಲಾಲಾಬಾದ್‌ನ ಪೂರ್ವ ಈಶಾನ್ಯಕ್ಕೆ ಸುಮಾರು 27 ಕಿ.ಮೀ ದೂರದಲ್ಲಿ 6.0 ತೀವ್ರತೆಯ ಭೂಕಂಪ ದಾಖಲಾಗಿದೆ. ಪೂರ್ವ ಅಫ್ಘಾನಿಸ್ತಾನದಾದ್ಯಂತ ಮೊದಲು ಭೂಕಂಪ ಸಂಭವಿಸಿದ ನಂತರ 30 ನಿಮಿಷಗಳ ಅವಧಿಯಲ್ಲಿಯೇ ಮತ್ತೆ ಮೂರರಿಂದ ನಾಲ್ಕು ಕಂಪನಗಳು ಸಂಭವಿಸಿವೆ. ಅವುಗಳ ತೀವ್ರತೆ 4 ರಿಂದ 5ರವರೆಗೆ ಇತ್ತು ಎಂದು ಮೂಲಗಳು ತಿಳಿಸಿವೆ.
ಇತ್ತ ಭಾರತವು ಅಫ್ಘಾನಿಸ್ತಾನದ ನೆರವಿಗೆ ಧಾವಿಸಿದ್ದು, ತುರ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೋಮವಾರ ಘೋಷಿಸಿದರು.
ಎಕ್ಸ್’ನಲ್ಲಿನ ಪೋಸ್ಟ್’ನಲ್ಲಿ, ಜೈಶಂಕರ್ ಅವರು, ಕಾಬೂಲ್’ಗೆ 1,000 ಕುಟುಂಬ ಟೆಂಟ್’ಗಳನ್ನು ತಲುಪಿಸಲಾಗಿದೆ ಮತ್ತು ಭೂಕಂಪದ ಕೇಂದ್ರಬಿಂದುವಾಗಿರುವ ಕುನಾರ್ ಪ್ರಾಂತ್ಯಕ್ಕೆ 15 ಟನ್ ಆಹಾರ ಸಾಮಗ್ರಿಗಳನ್ನ ಸಾಗಿಸಲಾಗುತ್ತಿದೆ ಎಂದು ಅವರು ದೃಢಪಡಿಸಿದರು.
‘ನಾಳೆಯಿಂದ ಭಾರತದಿಂದ ಮತ್ತಷ್ಟು ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗುವುದು. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ. ಈ ಕಷ್ಟದ ಸಮಯದಲ್ಲಿ ಭಾರತ ಅಫ್ಘಾನಿಸ್ತಾನದ ಬೆಂಬಲಕ್ಕೆ ನಿಂತಿದೆ’ ಎಂದು ತಿಳಿಸಿದರು.