ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಷ್ಠಿತ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಭಾರತದ ಮರಾಠ ಮಿಲಿಟರಿ ಭೂದೃಶ್ಯಗಳನ್ನು ಸೇರ್ಪಡೆ ಮಾಡಲಾಗಿದೆ. ಈ ಮೂಲಕ ಭಾರತದ 44 ತಾಣಗಳು ವಿಶ್ವ ಪಾರಂಪರಿಕ ಪಟ್ಟಿ ಸೇರ್ಪಡೆಯಾದಂತಾಗಿದೆ.
ಇದು ಭಾರತದ ಸಾಂಸ್ಕೃತಿಕ ಪರಂಪರೆಗೆ ಸಂದ ವಿಶ್ವದ ಗೌರವವಾಗಿದೆ. ಈ ಐತಿಹಾಸಿಕ ಮೈಲಿಗಲ್ಲನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಂಸ್ಕೃತಿ ಖಾತೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶ್ಲಾಘಿಸಿದ್ದು, ದೇಶದ ಜನರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕ್ರಿ.ಶ 17 ರಿಂದ 19ರ ಶತಮಾನದಲ್ಲಿ ಅಭಿವೃದ್ಧಿಪಡಿಸಲಾದ ಮರಾಠಾ ಮಿಲಿಟರಿ ಭೂದೃಶ್ಯಗಳು 12 ಭವ್ಯ ಕೋಟೆಗಳನ್ನು ಒಳಗೊಂಡಿದೆ. ಮರಾಠ ಸಾಮ್ರಾಜ್ಯದ ಯುದ್ಧತಂತ್ರದ ಸೇನಾ ದೃಷ್ಟಿ ಮತ್ತು ವಾಸ್ತುಶಿಲ್ಪದ ಚತುರತೆಯನ್ನು ತೋರಿಸುತ್ತದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಈ ಮನ್ನಣೆಯಿಂದ ಪ್ರತಿಯೊಬ್ಬ ಭಾರತೀಯನೂ ಹರ್ಷಗೊಂಡಿದ್ದಾನೆ. ಈ ‘ಮರಾಠ ಮಿಲಿಟರಿ ಭೂದೃಶ್ಯಗಳು’ 12 ಭವ್ಯ ಕೋಟೆಗಳನ್ನು ಒಳಗೊಂಡಿವೆ, ಅವುಗಳಲ್ಲಿ 11 ಮಹಾರಾಷ್ಟ್ರದಲ್ಲಿವೆ ಮತ್ತು 1 ತಮಿಳುನಾಡಿನಲ್ಲಿದೆ.ಅದ್ಭುತ ಮರಾಠ ಸಾಮ್ರಾಜ್ಯದಲ್ಲಿ ಉತ್ತಮ ಆಡಳಿತ, ಮಿಲಿಟರಿ ಶಕ್ತಿ, ಸಾಂಸ್ಕೃತಿಕ ಹೆಮ್ಮೆ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಒತ್ತು ನೀಡಲಾಗಿತ್ತು. ಮಹಾನ್ ಆಡಳಿತಗಾರರು ಯಾವುದೇ ಅನ್ಯಾಯಕ್ಕೆ ತಲೆಬಾಗಲು ನಿರಾಕರಿಸುವ ಮೂಲಕ ನಮಗೆ ಸ್ಫೂರ್ತಿಯಾಗಿದ್ದಾರೆ. ಈ ಕೋಟೆಗೆ ಭೇಟಿ ನೀಡಿ, ಮರಾಠ ಸಾಮ್ರಾಜ್ಯದ ಶ್ರೀಮಂತ ಇತಿಹಾಸ ಅರಿಯಬೇಕು ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದಿದ್ದಾರೆ.
ಈ ಸಂಬಂಧ ಜನವರಿ 2024 ರಲ್ಲಿ ವಿಶ್ವ ಪರಂಪರೆ ಸಮಿತಿಯ ಪರಿಗಣನೆಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಸಲಹಾ ಸಂಸ್ಥೆಗಳೊಂದಿಗೆ ಹಲವಾರು ತಾಂತ್ರಿಕ ಸಭೆಗಳು, ಸ್ಥಳ ಪರಿಶೀಲನೆ ಸೇರಿದಂತೆ 18 ತಿಂಗಳ ಪ್ರಕ್ರಿಯೆಯ ನಂತರ, ಈ ಐತಿಹಾಸಿಕ ನಿರ್ಧಾರವನ್ನು ವಿಶ್ವ ಪರಂಪರೆಯ ಸಮಿತಿಯ ಸದಸ್ಯರು ತೆಗೆದುಕೊಂಡಿದ್ದಾರೆ” ಎಂದು ಯುನೆಸ್ಕೋ ಸಂಸ್ಕೃತಿ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ಯಾರಿಸ್ ನಲ್ಲಿ ಶುಕ್ರವಾರ ನಡೆದ 47ನೇ ವಿಶ್ವ ಪಾರಂಪರಿಕ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.