Thursday, December 4, 2025

ಭಾರತದ ಮಹತ್ವದ ಹೆಜ್ಜೆ: ಫೈಟರ್ ಜೆಟ್ ಎಸ್ಕೇಪ್ ಸಿಸ್ಟಂನ ಹೈ-ಸ್ಪೀಡ್ ಪರೀಕ್ಷೆ ಯಶಸ್ವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುರ್ತು ಪರಿಸ್ಥಿತಿಯಲ್ಲಿ ಫೈಟರ್ ಜೆಟ್‌ನಿಂದ ಪೈಲಟ್‌ ಅಥವಾ ಸಿಬ್ಬಂದಿ ಸುರಕ್ಷಿತವಾಗಿ ಹೊರಬರಲು ಇರುವ ಏರ್‌ಕ್ರಾಫ್ಟ್ ಎಸ್ಕೇಪ್ ಸಿಸ್ಟಂನ ಪರೀಕ್ಷಾ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಕೆಲವೇ ದೇಶಗಳ ಸಾಲಿಗೆ ಭಾರತ ಹೆಮ್ಮೆಯಿಂದ ಸೇರಿಕೊಂಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು, ಈ ಮಹತ್ವದ ಎಸ್ಕೇಪ್ ಸಿಸ್ಟಂ ಅನ್ನು ಹೈಸ್ಪೀಡ್ ರಾಕೆಟ್ ಸ್ಲೆಡ್ ಮೂಲಕ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.

ಸ್ವದೇಶಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾದ ಈ ಪರೀಕ್ಷಾ ವ್ಯವಸ್ಥೆಯು, ಸಂಪೂರ್ಣ ಸಿಬ್ಬಂದಿ ರಕ್ಷಣೆ ಸೇರಿದಂತೆ ಹಲವು ಸುರಕ್ಷತಾ ಮಾನದಂಡಗಳನ್ನು ಕಠಿಣವಾಗಿ ಅಳೆಯುತ್ತದೆ. ಈ ಪರೀಕ್ಷೆಯಲ್ಲಿ ಏರ್‌ಕ್ರಾಫ್ಟ್ ಎಸ್ಕೇಪ್ ಸಿಸ್ಟಂ ಅನ್ನು ಒಂದು ರಾಕೆಟ್ ಪ್ರೊಪಲ್ಷನ್ ಸಾಧನಕ್ಕೆ ಜೋಡಿಸಿ, ಅದನ್ನು ಎರಡು ಹಳಿಗಳ ಮೇಲೆ ನಿಯಂತ್ರಿತ ವೇಗದಲ್ಲಿ ಓಡಿಸಲಾಯಿತು.

ವರದಿಗಳ ಪ್ರಕಾರ, ಈ ಎಸ್ಕೇಪ್ ಸಿಸ್ಟಂ ಅನ್ನು ಗಂಟೆಗೆ 800 ಕಿ.ಮೀ. ವೇಗದಲ್ಲಿ ಚಲಾಯಿಸಲಾಯಿತು. ಇದು ಆಕಾಶದಲ್ಲಿ ಫೈಟರ್ ಜೆಟ್ ಚಲಿಸುವಷ್ಟೇ ವೇಗವಾಗಿದೆ. ಈ ಭಾರೀ ವೇಗದ ನಡುವೆಯೇ, ಏರ್‌ಕ್ರಾಫ್ಟ್‌ನ ಮೇಲ್ಭಾಗದ ಕ್ಯಾನ್‌ಪೀ ಬೇರ್ಪಡುವುದು, ಡಮ್ಮಿ ಸಿಬ್ಬಂದಿಯನ್ನು ಯಶಸ್ವಿಯಾಗಿ ಇಜೆಕ್ಟ್ ಮಾಡುವುದು ಮತ್ತು ಅಂತಿಮವಾಗಿ ಪ್ಯಾರಚೂಟ್ ಮೂಲಕ ಸುರಕ್ಷಿತವಾಗಿ ಇಳಿಸುವುದು ಈ ಎಲ್ಲ ಕಾರ್ಯಗಳೂ ಯಶಸ್ವಿಯಾಗಿ ನೆರವೇರಿವೆ.

ನಿಜವಾದ ಪೈಲಟ್ ಬದಲಾಗಿ ಡಮ್ಮಿಯನ್ನು ಬಳಸಲಾಗಿದ್ದರೂ, ಎಜೆಕ್ಷನ್‌ನಿಂದ ಪ್ಯಾರಚೂಟ್ ತೆರೆಯುವವರೆಗಿನ ಪ್ರಕ್ರಿಯೆಗಳು ನೈಜವಾಗಿ ನಡೆದಿವೆ.

ಈ ಮಹತ್ವದ ಪರೀಕ್ಷೆಯು ಚಂಡೀಗಡದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿಯ ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ ಘಟಕದಲ್ಲಿ ನಡೆದಿದೆ. ಡಿಆರ್‌ಡಿಒದ ಈ ಪ್ರಯೋಗದಲ್ಲಿ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಗಳು ಕೂಡ ಕೈಜೋಡಿಸಿದ್ದವು.

ಈ ಅಡ್ವಾನ್ಸ್ಡ್ ಟೆಸ್ಟಿಂಗ್ ಫೆಸಿಲಿಟಿಯನ್ನು ಇಲ್ಲಿಯವರೆಗೆ ಬ್ರಿಟನ್, ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳು ಮಾತ್ರವೇ ಹೊಂದಿದ್ದವು. ಈಗ ಭಾರತವೂ ಈ ಪ್ರತಿಷ್ಠಿತ ದೇಶಗಳ ಸಾಲಿಗೆ ಸೇರಿಕೊಂಡಿದೆ.

error: Content is protected !!