ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಕಂಪನಕ್ಕೆ ಮ್ಯಾನ್ಮಾರ್ ಅಕ್ಷರಶ ತತ್ತರಿಸಿದ್ದು, ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಶನಿವಾರದ ಹೊತ್ತಿಗೆ ಸಾವಿನ ಸಂಖ್ಯೆ 1,000ಕ್ಕೆ ಏರಿಕೆಯಾಗಿದ್ದು, 2,376 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಗಳು ವರದಿ ಮಾಡಿವೆ.
ಇತ್ತ ಭಾರತವು ನೆರವಿನ ಹಸ್ತ ಚಾಚಿದ್ದು, ‘ಆಪರೇಷನ್ ಬ್ರಹ್ಮ’ ಅಡಿಯಲ್ಲಿ ಅಗತ್ಯ ವಸ್ತುಗಳನ್ನು ಕಳುಹಿಸಲಾಗುತ್ತಿದೆ. ಇದರ ಜೊತೆಗೆ ಭಾರತ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ 80 ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ತುಕಡಿಯನ್ನು ನಿಯೋಜಿಸಲು ನಿರ್ಧರಿಸಿದೆ.
ಫೆಡರಲ್ ವಿಪತ್ತು ಆಕಸ್ಮಿಕ ಪಡೆಯ ಸಿಬ್ಬಂದಿಯನ್ನು ಭೂಕಂಪ ರಕ್ಷಣಾ ಸಾಧನಗಳೊಂದಿಗೆ ನಿಯೋಜಿಸಲಾಗುತ್ತಿದೆ. 80 NDRF ಸಿಬ್ಬಂದಿಯ ತಂಡವನ್ನು ಮ್ಯಾನ್ಮಾರ್‌ಗೆ ಕಳುಹಿಸಲಾಗುತ್ತಿದೆ. ತಂಡ ಶನಿವಾರ ಸಂಜೆಯ ವೇಳೆಗೆ ತಲುಪುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಕಮಾಂಡೆಂಟ್ ಶ್ರೇಣಿಯ ಅಧಿಕಾರಿಯೊಬ್ಬರು ತಂಡವನ್ನು ಮುನ್ನಡೆಸಲಿದ್ದಾರೆ.