ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಆರು ದಿನಗಳಿಂದ ದೇಶಾದ್ಯಂತ ವಿಮಾನ ಪ್ರಯಾಣಿಕರನ್ನು ಸಂಕಷ್ಟಕ್ಕೆ ದೂಡಿದ್ದ ಇಂಡಿಗೋ ವಿಮಾನಸೇವೆಯ ಅಡಚಣೆ ಇದೀಗ ನಿಯಂತ್ರಣದ ದಿಕ್ಕಿನಲ್ಲಿ ಸಾಗುತ್ತಿದೆ. ನಿರಂತರ ವಿಮಾನ ರದ್ದು, ಭಾರೀ ವಿಳಂಬ ಮತ್ತು ಪ್ರಯಾಣಿಕರ ಅಸಮಾಧಾನದ ನಡುವೆ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಭಾನುವಾರ ಉನ್ನತ ಮಟ್ಟದ ಸಭೆ ನಡೆಸಿದ್ದು, ಸಮಸ್ಯೆ ಪರಿಹಾರಕ್ಕೆ ತಕ್ಷಣದ ಕ್ರಮಗಳನ್ನು ಸೂಚಿಸಿದ್ದಾರೆ.
ಸಭೆಯಲ್ಲಿ ವಿಮಾನ ನಿಲ್ದಾಣಗಳ ನಿರ್ವಾಹಕರು, ಇಂಡಿಗೋ ಅಧಿಕಾರಿಗಳು ಹಾಗೂ ಇತರೆ ಪಾಲುದಾರರು ಭಾಗವಹಿಸಿದ್ದರು. ರದ್ದಾಗುವ ಅಥವಾ ತೀವ್ರ ವಿಳಂಬವಾಗುವ ಪ್ರತಿಯೊಂದು ವಿಮಾನದ ಕುರಿತು ಪ್ರಯಾಣಿಕರಿಗೆ ಮುಂಚಿತವಾಗಿ ಎಸ್‌ಎಂಎಸ್ ಅಥವಾ ಕರೆ ಮೂಲಕ ಮಾಹಿತಿ ನೀಡಬೇಕು ಎಂದು ಸಚಿವರು ಸೂಚಿಸಿದ್ದಾರೆ. ಇದೇ ವೇಳೆ ರದ್ದಾದ ವಿಮಾನಗಳ ಟಿಕೆಟ್ ಮರುಪಾವತಿಯನ್ನು ಯಾವುದೇ ವಿಳಂಬವಿಲ್ಲದೆ ಪ್ರಕ್ರಿಯೆಗೊಳಿಸಬೇಕು ಎಂಬ ಆದೇಶವೂ ಹೊರಡಿಸಲಾಗಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ಮಾಹಿತಿ ಪ್ರಕಾರ, ಈ ಬಿಕ್ಕಟ್ಟಿನ ಅವಧಿಯಲ್ಲಿ ಇಂಡಿಗೋ ಸಂಸ್ಥೆ ಸುಮಾರು 610 ಕೋಟಿ ರೂಪಾಯಿ ಮೌಲ್ಯದ ಮರುಪಾವತಿಯನ್ನು ಪ್ರಕ್ರಿಯೆಗೊಳಿಸಿದೆ. ಜೊತೆಗೆ ಸಿಲುಕಿದ್ದ ಮೂರು ಸಾವಿರಕ್ಕೂ ಹೆಚ್ಚು ಲಗೇಜ್‌ಗಳನ್ನು ಪ್ರಯಾಣಿಕರಿಗೆ ಹಿಂತಿರುಗಿಸಲಾಗಿದೆ. ಉಳಿದ ಬ್ಯಾಗ್‌ಗಳನ್ನೂ 48 ಗಂಟೆಗಳೊಳಗೆ ವಿತರಿಸುವಂತೆ ಸೂಚಿಸಲಾಗಿದೆ.
ಇಂಡಿಗೋ ತನ್ನ ಬಹುತೇಕ ತಾಣಗಳಲ್ಲಿ ಸೇವೆ ಪುನರಾರಂಭಿಸಿರುವುದಾಗಿ ತಿಳಿಸಿದ್ದು, ಕಾರ್ಯನಿರ್ವಹಣೆಯ ಸಮಯಪಾಲನೆ 30 ಶೇಕಡೆಯಿಂದ 75 ಶೇಕಡಾವರೆಗೆ ಸುಧಾರಿಸಿದೆ. ಆದರೂ ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಕೆಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಇನ್ನೂ ಪ್ರಯಾಣಿಕರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.

