ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಿಂದ ಗೋವಾಕ್ಕೆ ಹೊರಟಿದ್ದ ಇಂಡಿಗೋ ವಿಮಾನವು ಎಂಜಿನ್ ವೈಫಲ್ಯದಿಂದಾಗಿ ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏರ್‌ಬಸ್ ಎ320 ನಿಯೋ ವಿಮಾನ ಬುಧವಾರ ರಾತ್ರಿ 9.52ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ತಾಂತ್ರಿಕ ದೋಷದಿಂದಾಗಿ ವಿಮಾನವನ್ನು ಮುಂಬೈನಲ್ಲಿ ತುರ್ತು ಭೂಸ್ಪರ್ಶಗೊಳಿಸಲಾಯಿತು ಎಂದು ಇಂಡಿಗೋ ಸಂಸ್ಥೆ ತನ್ನ ಹೇಳಿಕೆಯಲ್ಲಿ ಹೇಳಿದೆ.
ದೆಹಲಿ-ಗೋವಾ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇಂಡಿಗೋ ವಿಮಾನ 6E-6271ರ ಒಂದು ಎಂಜಿನ್ ವೈಫಲ್ಯವಾದ ಕಾರಣ ಮುಂಬೈಗೆ ತಿರುಗಿಸಲಾಯಿತು. ಬಳಿಕ ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿ ಘೋಷಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಜುಲೈ 16ರಂದು ದೆಹಲಿಯಿಂದ ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರಾಟ ನಡೆಸುತ್ತಿದ್ದ 6E 6271 ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಹೀಗಾಗಿ, ವಿಮಾನವನ್ನು ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲಾಯಿತು. ವಿಮಾನವು ಅಗತ್ಯ ತಪಾಸಣೆ ಮತ್ತು ನಿರ್ವಹಣೆಗೆ ಒಳಪಡಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.