Monday, December 8, 2025

ಮತ್ತೆ ಸಾಮಾನ್ಯ ಸ್ಥಿತಿಯತ್ತ ಇಂಡಿಗೋ ವಿಮಾನ: ಪ್ರಯಾಣಿಕರಿಗೆ 610 ಕೋಟಿ ರೂ. ರೀಫಂಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದ ಇಂಡಿಗೋ ವಿಮಾನದ ಬಿಕ್ಕಟ್ಟು ನಿಧಾನವಾಗಿ ಬಗೆಹರಿಯುವ ಲಕ್ಷಣ ಗೋಚರಿಸುತ್ತಿದೆ.

ಈಗಾಗಲೇ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆ ಹರಿಸಲು ಸೂಚಿಸಿದೆ. ಅದರಂತೆ ಡಿಸೆಂಬರ್‌ 7ರಂದು ಪರಿಸ್ಥಿತಿ ಕೊಂಚ ಸುಧಾರಿಸಿರುವ ಲಕ್ಷಣ ಗೋಚರಿಸಿದೆ. ಈಗಾಗಲೇ 3,000 ಲಗೇಜ್‌ ಸಂಬಂಧಪಟ್ಟವರಿಗೆ ನೀಡಲಾಗಿದ್ದು, 610 ಕೋಟಿ ರೂ. ಮರು ಪಾವತಿಸಲಾಗಿದೆ ಎಂದು ಇಂಡಿಗೋ ಅಧಿಕಾರಿಗಳು ತಿಳಿಸಿದ್ದಾರೆ.

‘ʼಇಂಡಿಗೋ ವಿಮಾನ ಹಾರಾಟದಲ್ಲಿ ಸುಧಾರಣೆ ಕಂಡು ಬಂದಿದೆ. ಡಿಸೆಂಬರ್‌ 5ರಂದು 706 ವಿಮಾನ ಹಾರಾಟ ನಡೆಸಿದ್ದರೆ, ಡಿಸೆಂಬರ್‌ 7ರಂದು ಈ ಸಂಖ್ಯೆ ಈಗ 1,565ಕ್ಕೆ ತಲುಪಿದೆ. ದಿನಾಂತ್ಯಕ್ಕೆ 1,650ಕ್ಕೆ ಹೆಚ್ಚಾಗಲಿದೆʼ ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ. 138 ಸ್ಥಳಗಳ ಪೈಕಿ 137 ಸ್ಥಳಗಳ ಸಂಚಾರ ಆರಂಭವಾಗಿದೆ. ಆ ಮೂಲಕ ಸಂಚಾರ ಶನಿವಾರಕ್ಕಿಂತ ಶೇ. 30ರಷ್ಟು ಹೆಚ್ಚಳ ಕಂಡಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ದೇಶಾದ್ಯಂತ ವಿಮಾನ ಪ್ರಯಾಣ ಕಾರ್ಯಾಚರಣೆ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಎಲ್ಲ ಇತರ ದೇಶೀಯ ವಿಮಾನಯಾನ ಸಂಸ್ಥೆಗಳು ಸರಾಗವಾಗಿ ಮತ್ತು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂಡಿಗೋದ ಕಾರ್ಯಕ್ಷಮತೆಯಲ್ಲೂ ಸುಧಾರಣೆ ಕಂಡು ಬಂದಿದೆ. ವಿಮಾನ ವೇಳಾಪಟ್ಟಿ ಸಾಮಾನ್ಯ ಮಟ್ಟಕ್ಕೆ ಮರಳುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಶನಿವಾರ ಸರಕಾರ ಇಂಡಿಗೋ ಸಂಸ್ಥೆಗೆ ಸೂಚನೆ ನೀಡಿ ಎಲ್ಲ ಪ್ರಯಾಣಿಕರಿಗೆ ಡಿಸೆಂಬರ್‌ 7ರ ರಾತ್ರಿ 8 ಗಂಟೆಯೊಳಗೆ ಹಣ ಮರುಪಾವತಿ ಮಾಡಬೇಕೆಂದು ಹೇಳಿತ್ತು. ಸದ್ಯ ಮರುಪಾವತಿ ಕಾರ್ಯ ವೇಗದಿಂದ ಸಾಗುತ್ತಿದ್ದು ಈಗಾಗಲೇ 610 ಕೋಟಿ ರೂ. ಮರಳಿಸಲಾಗಿದೆ.

ಪ್ರಯಾಣವನ್ನು ಮರುಹೊಂದಿಸಲು ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಡೆಯುವಂತಿಲ್ಲ ಎಂದು ಹೇಳಿದೆ. ಮರುಪಾವತಿ ಮತ್ತು ಮರುಬುಕಿಂಗ್ ಸಮಸ್ಯೆಗಳ ಕುರಿತು ಪ್ರಯಾಣಿಕರಿಗೆ ಪೂರ್ವಭಾವಿಯಾಗಿ ಸಹಾಯ ಮಾಡಲು ಪ್ರತ್ಯೇಕ ಕೌಂಟರ್‌ ಆರಂಭಿಸುವಂತೆ ಸೂಚಿಸಿದೆ. ದಿಕ್ಕಾಪಾಲಾಗಿರುವ ಲಗೇಜ್‌ಗಳನ್ನು 2 ದಿನಗಳ ಒಳಗೆ ಪ್ರಯಾಣಿಕರಿಗೆ ತಲುಪಿಸಲೂ ಆದೇಶ ನೀಡಿದೆ.

ಡಿಸೆಂಬರ್ 15ರವರೆಗೆ ಬುಕಿಂಗ್‌ಗಳ ಕ್ಯಾನ್ಸಲ್‌ ಮತ್ತು ಮರುಹೊಂದಾಣಿಕೆ ವಿನಂತಿಗೆ ಸಂಪೂರ್ಣ ವಿನಾಯಿತಿ ನೀಡುವುದಾಗಿ ವಿಮಾನಯಾನ ಸಂಸ್ಥೆ ಪುನರುಚ್ಚರಿಸಿದೆ. ಮರುಪಾವತಿ ಮತ್ತು ಲಗೇಜ್ ವಿಂಗಡಿಸುವ ಪ್ರಕ್ರಿಯೆಯು ವೇಗವಾಗಿ ನಡೆಯುತ್ತಿದೆ ಎಂದು ಹೇಳಿದೆ. ಸಾಮಾನ್ಯ ಸೇವೆಯನ್ನು ಪುನರಾರಂಭಿಸಲು ನಾವು ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದೇವೆ. ದಯವಿಟ್ಟು ನಮ್ಮೊಂದಿಗೆ ಸಹಕರಿಸಿ ಎಂದು ಇಂಡಿಗೋ ಪೋಸ್ಟ್‌ ಮಾಡಿದೆ.

ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಮತ್ತು ಗೋವಾದ ವಿಮಾನ ನಿಲ್ದಾಣಗಳ ನಿರ್ದೇಶಕರು ಇಂದು ಟರ್ಮಿನಲ್‌ಗಳಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ದೃಢಪಡಿಸಿದ್ದಾರೆ. ಚೆಕ್-ಇನ್, ಭದ್ರತಾ ಅಥವಾ ಬೋರ್ಡಿಂಗ್ ಪಾಯಿಂಟ್‌ಗಳಲ್ಲಿ ಪ್ರಯಾಣಿಕರ ಚಲನೆ ಸುಗಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!