March 19, 2026
Thursday, March 19, 2026
spot_img

ಕೊಲಂಬೊದಲ್ಲಿ ಇಂಡೋ-ಪಾಕ್ ಮಹಾಕಾಳಗ: ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾದ ಕೊಲಂಬೊದಲ್ಲಿರುವ ಐತಿಹಾಸಿಕ ಆರ್. ಪ್ರೇಮದಾಸ ಕ್ರೀಡಾಂಗಣ ಇಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ. 2026ರ ಟಿ20 ವಿಶ್ವಕಪ್‌ನ ಗುಂಪು ಹಂತದ ಅತ್ಯಂತ ನಿರ್ಣಾಯಕ ಪಂದ್ಯ ಇದಾಗಿದ್ದು, ಸೂಪರ್-8 ಹಂತಕ್ಕೇರಲು ಎರಡೂ ತಂಡಗಳಿಗೆ ಈ ಗೆಲುವು ಅನಿವಾರ್ಯವಾಗಿದೆ.

ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದ್ದು, ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಅಘಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಹಳೆಯ ವಿನ್ನಿಂಗ್ ಕಾಂಬಿನೇಷನ್ ಅನ್ನೇ ಮುಂದುವರಿಸಿದ್ದಾರೆ.

ಟಾಸ್ ಸೋತರೂ ಆತ್ಮವಿಶ್ವಾಸದಿಂದಲೇ ಮಾತನಾಡಿದ ಭಾರತದ ನಾಯಕ ಸೂರ್ಯಕುಮಾರ್ ಯಾದವ್, ತಂಡದಲ್ಲಿ ಎರಡು ಮಹತ್ವದ ಬದಲಾವಣೆಗಳನ್ನು ಘೋಷಿಸಿದ್ದಾರೆ. ಯುವ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತು ಸ್ಪಿನ್ ಮ್ಯಾಜಿಷಿಯನ್ ಕುಲ್ದೀಪ್ ಯಾದವ್ ಅಂತಿಮ 11ರ ಬಳಗಕ್ಕೆ ಮರಳಿದ್ದಾರೆ. ಇವರ ಆಗಮನದಿಂದ ಅರ್ಶ್ದೀಪ್ ಸಿಂಗ್ ಮತ್ತು ಸಂಜು ಸ್ಯಾಮ್ಸನ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು ಈ ಉಭಯ ತಂಡಗಳ 9ನೇ ಮುಖಾಮುಖಿ. ಈ ಹಿಂದಿನ 8 ಪಂದ್ಯಗಳಲ್ಲಿ ಭಾರತ 7 ಬಾರಿ ಜಯಭೇರಿ ಬಾರಿಸಿದ್ದರೆ, ಪಾಕಿಸ್ತಾನ ಕೇವಲ 1 ಬಾರಿ ಮಾತ್ರ ಗೆದ್ದಿದೆ. ಒಟ್ಟಾರೆ ಟಿ20 ಅಂಕಿಅಂಶಗಳನ್ನು ಗಮನಿಸಿದರೆ, ಆಡಿದ 16 ಪಂದ್ಯಗಳಲ್ಲಿ ಭಾರತ 12ರಲ್ಲಿ ಗೆದ್ದು ಪ್ರಾಬಲ್ಯ ಮೆರೆದಿದೆ. ಇಂದು ಭಾರತಕ್ಕೆ ತನ್ನ 13ನೇ ಜಯ ದಾಖಲಿಸುವ ಸುವರ್ಣ ಅವಕಾಶವಿದೆ.

ಪಾಕಿಸ್ತಾನ ತಂಡ: ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಸಲ್ಮಾನ್ ಅಘಾ (ನಾಯಕ), ಬಾಬರ್ ಆಝಂ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಶಾಹೀನ್ ಅಫ್ರಿದಿ, ಅಬ್ರಾರ್ ಅಹ್ಮದ್, ಉಸ್ಮಾನ್ ತಾರಿಕ್.

ಭಾರತ ತಂಡ: ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ಶಿವಂ ದುಬೆ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !