ಉತ್ತರ ಪ್ರದೇಶದತ್ತ ಮುಖ ಮಾಡುತ್ತಿದ್ದಾರೆ ಪಂಜಾಬಿನ ಉದ್ಯಮಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹತ್ತುತಿಂಗಳ ಹಿಂದಷ್ಟೇ ಪಂಜಾಬಿನಲ್ಲಿ ಅಧಿಕಾರಕ್ಕೆ ಬಂದಿರುವ ಭಗವಂತ್‌ ಮಾನ್‌ ಸರ್ಕಾರ ಒಂದಲ್ಲ ಒಂದು ಕಾರಣಕ್ಕಾಗಿ ಹಲವಾರು ಟೀಕೆಗಳಿಗೆ ಗುರಿಯಾಗುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಪಂಜಾಬಿನ ಉದ್ಯಮಿಗಳು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿ ಮಾಡಿದ್ದಾರೆ. ಹಾಗೆ ಭೇಟಿ ಮಾಡಿದ ಉದ್ಯಮಿಗಳು ತಮ್ಮ ಭೇಟಿಯ ಹಿಂದಿರುವ ಕಾರಣವನ್ನು ವಿವರಿಸಿದ್ದು ಪಂಜಾಬಿನಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಯ ಕುರಿತು ಕಳವಳ ವ್ಯಕ್ತಪಡಿಸಿದ್ದು, ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ನಿರಾಸಕ್ತಿ ತೋರುತ್ತಿರುವುದಕ್ಕೆ ಪಂಜಾಬಿನ ಭಗವಂತಮಾನ್‌ ಸರ್ಕಾರವನ್ನು ಅವರು ದೂಷಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಉತ್ತಮ ಕೈಗಾರಿಕಾ ನೀತಿಯಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಪಂಜಾಬಿಗಿಂತ ಉತ್ತರ ಪ್ರದೇಶ ಹೂಡಿಕೆಗೆ ಅನುಕೂಲಕರವಾಗಿದೆ. ಬಹುಮುಖ್ಯವಾಗಿ ಪಂಜಾಬಿನ ಮುಖ್ಯಮಂತ್ರಿಯವರಿಗೆ ಕೈಗಾರಿಕೆಗಳ ಅಭಿವೃದ್ಧಿಯ ಬಗ್ಗೆ ಆಸಕ್ತಿಯಿಲ್ಲ ಎಂದು ಈ ಉದ್ಯಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ. 50 ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ತಂಡವನ್ನು ಭೇಟಿ ಮಾಡಿದ್ದು ರಾಜ್ಯದಲ್ಲಿ ಕನಿಷ್ಠ 5 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯ ಕುರಿತು ಮಾತುಕತೆ ನಡೆಸಿದ್ದಾರೆ. ವಿಪರ್ಯಾಸವೇನೆಂದರೆ ಇತ್ತ ಪಂಜಾಬಿನ ಉದ್ಯಮಿಗಳು ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದ್ದರೆ ಅತ್ತ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಪಂಜಾಬಿನಲ್ಲಿ ಹೂಡಿಕೆಗಾಗಿ ದಕ್ಷಿಣರಾಜ್ಯಗಳ ಪ್ರವಾಸದಲ್ಲಿದ್ದಾರೆ.

“ಉತ್ತರ ಪ್ರದೇಶವು ಕೈಗಾರಿಕೆಗಳಿಗೆ ಸಬ್ಸಿಡಿಗಳು ಮತ್ತು ಇತರ ಸೌಲಭ್ಯಗಳ ವಿಷಯದಲ್ಲಿ ಇದೀಗ ದೇಶದಲ್ಲಿ ಅತ್ಯುತ್ತಮ ಕೈಗಾರಿಕಾ ನೀತಿಯನ್ನು ಹೊಂದಿದೆ, ಅದಕ್ಕೆಂದೇ ಉತ್ತಮ ತಂಡವನ್ನೂ ಯುಪಿಯಲ್ಲಿ ನಿಯೋಜಿಸಲಾಗಿದೆ” ಎಂದು ಪಂಜಾಬಿನ ಉದ್ಯಮಿಗಳು ಹೇಳಿದ್ದಾರೆ. ಯುಪಿ ಮುಖ್ಯಮಂತ್ರಿಯೊಂದಿಗಿನ ಸಭೆಯ ಕುರಿತು ಉದ್ಯಮಿಯೊಬ್ಬರು ಮಾತನಾಡಿದ್ದು “ಉತ್ತರ ಪ್ರದೇಶದ ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ಸಿಎಂ ಆದಿತ್ಯನಾಥ್‌ ಅವರು ತಮ್ಮ ಬೆರಳತುದಿಯಲ್ಲಿ ರಾಜ್ಯದ ಎಲ್ಲಾ ಮಾಹಿತಿಯನ್ನು ಹೊಂದಿದ್ದರು. ಅವರು ನಮ್ಮ ಎಲ್ಲಾ ಪ್ರಶ್ನೆಗಳಿಗೆ ತಿಳುವಳಿಕೆಯಿಂದ ಉತ್ತರಿಸಿದರು. ಆದರೆ ಸಿಎಂ ಭಗವಂತ್‌ ಮಾನ್‌ ಅವರೊಂದಿಗೆ ಸಭೆ ನಡೆಸಿದಾಗ ಅವರ ಪಕ್ಕದಲ್ಲಿ 20 ಅಧಿಕಾರಿಗಳ ದಂಡೇ ಇರುತ್ತಿತ್ತು. ನಮ್ಮ ಪ್ರಶ್ನೆಗಳಿಗೆ ಉತ್ತರಿಸುವಂತೆ ಮಾನ್‌ ಅಧಿಕಾರಿಗಳಿಗೆ ನಿರ್ದೇಶಿಸುತ್ತಿದ್ದರು. ಇದು ಉದ್ದಿಮೆಗಳ ಬಗ್ಗೆ ಅವರಿಗಿರುವ ನಿರಾಸಕ್ತಿಯನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ. ಅಲ್ಲದೇ ರಾಜ್ಯದ ಕಾನೂನು ಸುವ್ಯವಸ್ಥೆಯ ಕುರಿತು ಮಾತನಾಡಿ “ನಾವು ಪಂಜಾಬ್‌ನಲ್ಲಿ 80 ರ ದಶಕಕ್ಕೆ ಮರಳಿದಂತೆ ತೋರುತ್ತದೆ. ಸೃಷ್ಟಿಯಾಗುತ್ತಿರುವ ವಾತಾವರಣದ ಬಗ್ಗೆ ನಮಗೆ ಅಭದ್ರತೆಯ ಭಾವನೆ ಇದೆ. ಅಪರಾಧದ ಮೇಲೆ ನಿಯಂತ್ರಣವಿಲ್ಲ. ನಮ್ಮ ಕಾರ್ಮಿಕರನ್ನು ಬಹುತೇಕ ಪ್ರತಿದಿನ ಲೂಟಿ ಮಾಡಲಾಗುತ್ತದೆ; ಅವರ ಸೈಕಲ್‌ಗಳು, ದ್ವಿಚಕ್ರವಾಹನಗಳು ಮತ್ತು ಮೊಬೈಲ್ ಫೋನ್‌ಗಳನ್ನು ಕಸಿದುಕೊಳ್ಳಲಾಗಿದೆ ಮತ್ತು ಸರ್ಕಾರ ಇದಕ್ಕೆಲ್ಲ ಕಣ್ಣು ಮುಚ್ಚಿ ಕೂತಿದೆ” ಎಂದು ಹೇಳಿದ್ದಾರೆ.

ಈ ಎಲ್ಲ ಕಾರಣಗಳಿಂದ ಪಂಜಾಬಿನ ಉದ್ಯಮಿಗಳು ತವರು ರಾಜ್ಯವನ್ನು ತೊರೆದು ಉತ್ತರ ಪ್ರದೇಶದತ್ತ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!