ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಪಂಚದಾದ್ಯಂತ ಆರು ಜನರಲ್ಲಿ ಒಬ್ಬರು ಸಂತಾನಹೀನತೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತನ್ನ ನೂತನ ವರದಿಯಲ್ಲಿ ಹೇಳಿದ್ದು ಜಗತ್ತಿನಾದ್ಯಂತ ಈ ಕುರಿತು ಕೈಗೆಟಕುವ ಸೌಲಭ್ಯಗಳನ್ನು, ಆರೋಗ್ಯ ಸೇವೆಗಳನ್ನು ನೀಡುವ ಅಗತ್ಯವಿದೆ ಎಂದಿದೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ವಿಶ್ವದ ಒಟ್ಟಾರೆ ವಯಸ್ಕ ಜನಸಂಖ್ಯೆಯಲ್ಲಿ 17.5 ಶೇಕಡಾದಷ್ಟು ಜನ ಬಂಜೆತನದ ಸಮಸ್ಯೆಗೆ ಒಳಗಾಗಿದ್ದಾರೆ. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಈ ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ಬಂಜೆ ತನದ ಸಮಸ್ಯೆ ಎಲ್ಲ ಕಡೆ ವ್ಯಾಪಿಸಿದೆ. ಯೌವನ ಹಂತದಲ್ಲಿರುವ ಜನಸಂಖ್ಯೆ ತೆಗೆದುಕೊಂಡರೆ ಸಂತಾನಹೀನತೆ ಪ್ರಮಾಣ ಶೇ. 17.5ರಷ್ಟಿದೆ. ಒಟ್ಟಾರೆ ಜೀವನಾವಧಿ ಲೆಕ್ಕಾಚಾರಕ್ಕೆ ಬಂದರೆ ಈ ಪ್ರಮಾಣವು ಆದಾಯ ಹೆಚ್ಚಿರುವ ದೇಶಗಳಲ್ಲಿ ಶೇ. 17.8 ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ಶೇ. 16.5ರಷ್ಟಿದೆ.
ಬಂಜೆತನ ಅಥವಾ ಸಂತಾನಹೀನತೆ ಎಂಬುದು ಗಂಡು ಅಥವಾ ಹೆಣ್ಣು ಸಂತಾನೋತ್ಪತ್ತಿ ವ್ಯವಸ್ಥೆಯ ಕಾಯಿಲೆಯಾಗಿದ್ದು 12 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಪ್ರಯತ್ನದ ನಂತರವೂ ಗರ್ಭಧಾರಣೆ ಸಾಧಿಸಲು ವಿಫಲವಾದರೆ ಅದನ್ನು ಬಂಜೆತನ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಈ ಸಮಸ್ಯೆಯು ಜನರಿಗೆ ಸಾಮಾಜಿಕ ಕಳಂಕ ಮತ್ತು ಆರ್ಥಿಕ ತೊಂದರೆಗಳನ್ನು ಉಂಟು ಮಾಡುತ್ತದೆ. ಅವರ ಮಾನಸಿಕ ಯೋಗ ಕ್ಷೇಮದ ಮೇಲೂ ಪರಿಣಾಮ ಬೀರುತ್ತದೆ ಎಂದು WHO ವರದಿ ಉಲ್ಲೇಖಿಸಿದೆ.
ಅತಿ ಹೆಚ್ಚಿನ ವೆಚ್ಚದಿಂದಾಗಿ ಬಂಜೆತನದ ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಹೆಚ್ಚಿನ ವೈದ್ಯಕೀಯ ಆರೈಕೆ, ಇನ್ ವಿಟ್ರೊ ಫರ್ಟಿಲೈಸೇಶನ್ (IVF) ನಂತಹ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನಗಳು ಬಹುತೇಕರಿಗೆ ಕೈಗೆಟುಕುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಜನರ ವಾರ್ಷಿಕ ಆದಾಯಕ್ಕಿಂತ ಹೆಚ್ಚು ವೆಚ್ಚ ಒಂದು ಸುತ್ತಿನ IVFಗಾಗಿ ಪಾವತಿಸಬೇಕಾಗುತ್ತದೆ. ಹೀಗಾಗಿ ಈ ಕುರಿತು ಅಗತ್ಯ ಆರೋಗ್ಯ ನೀತಿಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.