ಹೊಸದಿಗಂತ ಡಿಜಿಟಲ್ ಡೆಸ್ಕ್
ಬ್ರಿಟಿಷ್ ಹಣಕಾಸು ಸಚಿವ ರಿಷಿ ಸುನಕ್ ಅವರ ಪತ್ನಿ, ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರು ಎಲಿಜಬೆತ್ ರಾಣಿಗಿಂತ ಶ್ರೀಮಂತರು ಎಂದು ಇತ್ತೀಚಿನ ವರದಿಯಲ್ಲಿ ಬಹಿರಂಗವಾಗಿದೆ.
.ರಿಷಿ ಸುನಕ್, ಬ್ರಿಟನ್ ನ ಭವಿಷ್ಯದ ಪ್ರಧಾನಿಯೆಂದೇ ಬಿಂಬಿತರಾಗಿದ್ದರು. ಆದ್ರೀಗ ಬೆಲೆ ಏರಿಕೆಯಿಂದಾಗಿ ಅವರ ಜನಪ್ರಿಯತೆ ಕುಸಿದಿದೆ. ಇದರ ಜೊತೆ ಜೊತೆಗೆ ಅಕ್ಷತಾ ಮೂರ್ತಿ ಅವರ ವಿದೇಶಿ ಆದಾಯವನ್ನು ಬ್ರಿಟಿಷ್ ತೆರಿಗೆ ಅಧಿಕಾರಿಗಳಿಂದ ಮುಚ್ಚಿಡಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಅಕ್ಷತಾರ ತಂದೆ ನಾರಾಯಣಮೂರ್ತಿ 1981ರಲ್ಲಿ ಇನ್ಫೋಸಿಸ್ ಅನ್ನು ಹುಟ್ಟುಹಾಕಿದ್ದರು. ಈ ಸಂಸ್ಥೆ ಭಾರತದ ಟೆಕ್ ಜಗತ್ತಿನಲ್ಲಿ ಆಮೂಲಾಗ್ರ ಬದಲಾವಣೆಯನ್ನೇ ತಂದಿದೆ.
ಪತ್ನಿ ಸುಧಾಮೂರ್ತಿ ಅವರಿಂದ 10 ಸಾವಿರ ರೂಪಾಯಿ ಸಾಲ ಪಡೆದು ಕಟ್ಟಿದ ಕಂಪನಿಯ ಮೌಲ್ಯ ಈಗ 100 ಬಿಲಿಯನ್ ಡಾಲರ್. ಸುಧಾ ಮೂರ್ತಿ ಕೂಡ ಟಾಟಾ ಮೋಟರ್ಸ್ ನ ಮೊದಲ ಮಹಿಳಾ ಎಂಜಿನಿಯರ್ ಎನಿಸಿಕೊಂಡಿದ್ದರು.
ಇನ್ಫೋಸಿಸ್ ನಲ್ಲಿ ಅಕ್ಷತಾ ಮೂರ್ತಿ 1 ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಸದ್ಯ ಕ್ವೀನ್ ಎಲಿಜಬೆತ್-2 ಅವರ ಒಟ್ಟಾರೆ ಆಸ್ತಿ ಮೌಲ್ಯ 460 ಮಿಲಿಯನ್ ಡಾಲರ್. ಅಕ್ಷತಾ ಮೂರ್ತಿ ಅವರ ಬಳಿಯಿರೋ ಆಸ್ತಿಯ ಮೌಲ್ಯ ಅದಕ್ಕಿಂತಲೂ ಹೆಚ್ಚಾಗಿದ್ದು, ಬ್ರಿಟನ್ ರಾಣಿಗಿಂತಲೂ ಆಕೆ ಸಿರಿವಂತೆ.
ಲಂಡನ್ ನ ಕೆನ್ಸಿಂಗ್ಟನ್ ನಲ್ಲಿ ಅಕ್ಷತಾ ಹಾಗೂ ರಿಷಿ ದಂಪತಿಗೆ ಸೇರಿದ 5 ಬೆಡ್ ರೂಮ್ ಗಳ ದೊಡ್ಡ ಮನೆಯಿದೆ. ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಒಂದು ಫ್ಲಾಟ್ ಇದೆ. ಇಂತಹ ಸುಮಾರು 4 ಪ್ರಾಪರ್ಟಿಗಳು ಇವರ ಹೆಸರಲ್ಲಿವೆ.
Catamaran ಕಂಪನಿಯಲ್ಲಿ ಅಕ್ಷತಾ ಡೈರೆಕ್ಟರ್ ಹುದ್ದೆ ಹೊಂದಿದ್ದಾರೆ. 2013ರಲ್ಲಿ ರಿಷಿ ಹಾಗೂ ಅಕ್ಷತಾ ಈ ಕಂಪನಿಯನ್ನು ಹುಟ್ಟುಹಾಕಿಸಿದ್ದರು. ಅಕ್ಷತಾ ಮೂರ್ತಿ 2010ರಲ್ಲಿ ಅಕ್ಷತಾ ಡಿಸೈನ್ಸ್ ಎಂಬ ಫ್ಯಾಷನ್ ಲೇಬಲ್ ಕೂಡ ಆರಂಭಿಸಿದ್ದರು.
ಅಮೆರಿಕದ ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿಯಲ್ಲಿ ಎಂಬಿಎ ಓದುತ್ತಿದ್ದಾಗಲೇ ಅಕ್ಷತಾಗೆ ರಿಷಿ ಸುನಕ್ ಅವರ ಪರಿಚಯವಾಗಿತ್ತು. 2009ರಲ್ಲಿ ಅಕ್ಷತಾ ಹಾಗೂ ರಿಷಿ ಅವರ ವಿವಾಹ ನೆರವೇರಿತ್ತು.