ಹೊಸದಿಗಂತ ವರದಿ,ವಿಜಯನಗರ:
ತುಂಗಭದ್ರಾ ಜಲಾಶಯದ ಒಳ ಹರಿವು ಗಣನೀಯವಾಗಿ ಹೆಚ್ಚಳವಾಗಿರುವುದರಿಂದ ಶನಿವಾರ ಎರಡನೇ ಬಾರಿಗೆ ಡ್ಯಾಂ ನ ೨೬ ಕ್ರಸ್ಟ್ ಗೇಟ್‌ಗಳಿಂದ ೭೮ ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ.
ತುಂಗಾ ಜಲಾಶಯದಿಂದ ೭೦ ಸಾವಿರ ಕ್ಯೂಸೆಕ್, ಭದ್ರಾ ಅಣೆಕಟ್ಟಿನಿಂದ ೨೦ ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ವರದಾ ನದಿ ಹಾಗೂ ತುಂಗಭದ್ರಾ ನದಿಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಮುಂದುವರಿದಿದ್ದರಿoದ ತುಂಗಭದ್ರಾ ಜಲಾಶಯಕ್ಕೆ ೭೦ ಸಾವಿರ ಕ್ಯೂಸೆಕ್ ನೀರು ದಾಖಲಾಗುತ್ತಿದೆ. ಹೀಗಾಗಿ ೬೦ ರಿಂದ ೯೦ ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸುವುದಾಗಿ ಟಿಬಿ ಬೋರ್ಡ್ ಎಚ್ಚರಿಕೆ ನೀಡಿದ್ದು, ಸದ್ಯ ೭೮ ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಸದ್ಯ ಅಣೆಕಟ್ಟೆಯ ೧೬೩೩ ಅಡಿಯಲ್ಲಿ ೧೬೨೫.೪೩ ಅಡಿಗೆ ನೀರು ತಲುಪಿದೆ. ೧೦೫.೭೮೮ ಟಿಎಂಸಿ ಅಡಿ ಒಟ್ಟು ಸಾಮರ್ಥ್ಯದಲ್ಲಿ ೭೭.೯೦೭ ಟಿಎಂಸಿ ಅಡಿ ನೀರು ಸಂಗ್ರಹಿಸಲಾಗಿದೆ. ಕಳೆದ ವರ್ಷ ೧೯ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿರುವ ಜಾಗದಲ್ಲಿ ತಾತ್ಕಾಲಿಕವಾಗಿ ಸ್ಟಾಪ್ಲರ್ ಗೇಟ್ ಅಳವಡಿಸಲಾಗಿದೆ. ಅಲ್ಲದೇ, ವಿವಿಧ ಗೇಟ್‌ಗಳ ಬದಲಾವಣೆಗೆ ತಜ್ಞರು ಸೂಚನೆ ನೀಡಿದ್ದರಿಂದ ಈ ಬಾರಿ ಗರಿಷ್ಠ ೮೦ ಟಿಎಂಸಿ ಅಡಿ ನೀರು ಸಂಗ್ರಹಕ್ಕೆ ಟಿಬಿ ಬೋರ್ಡ್ ಮಿತಿಗೊಳಿಸಿದೆ.