ಹೊಸದಿಗಂತ ವರದಿ, ವಿಜಯಪುರ:
ಕೆಲಸಕ್ಕೆ ಬರೊದಿಲ್ಲ ಎಂದಿದಕ್ಕೆ ಮೂವರು ಕಾರ್ಮಿಕರನ್ನು ಅಮಾನುಷ್ಯವಾಗಿ ಥಳಿಸಿರುವ ಘಟನೆಗೆ ಸಂಬಂಧಿಸಿದಂತೆ ನಗರ ಹೊರ ವಲಯ ಗಾಂಧಿನಗರದ ಇಟ್ಟಂಗಿ ಬಟ್ಟಿ ಮಾಲೀಕ ಸೇರಿ ಮೂವರನ್ನು ಬಂಧಿಸಲಾಗಿದೆ.
ಇಟ್ಟಂಗಿ ಬಟ್ಟಿ ಮಾಲೀಕ ಖೇಮು ರಾಠೋಡ, ಸಚಿನ್ ಮಾನವರ, ವಿಶಾಲ ಜುಮನಾಳ ಎಂಬ ಮೂರು ಆರೋಪಿಗಳನ್ನು ಬಂಧಿಸಿದ್ದು, ಇತರೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ಕಾರ್ಮಿಕರಾದ ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಹಲ್ಲೆಗೊಳಗಾದವರು.
ಈ ಕಾರ್ಮಿಕರು ಇಟ್ಟಂಗಿ ಬಟ್ಟಿಯಲ್ಲಿ ದಿನಕ್ಕೆ 600 ರೂ.ಗಳಂತೆ ಕೂಲಿ ಕೆಲಸ ಮಾಡುತ್ತಿದ್ದರು. ಕಳೆದ ಸಂಕ್ರಾಂತಿ ಹಬ್ಬದ ನಿಮಿತ್ತ ಮನೆಗೆ ತೆರಳಿದ್ದ ಕಾರ್ಮಿಕರು ಮರಳಿ ಜ.16 ರಂದು ಇಟ್ಟಂಗಿ ಬಟ್ಟಿಗೆ ಆಗಮಿಸಿ, ತಮ್ಮ ಸಾಮಾನುಗಳನ್ನು ಕೊಂಡೊಯ್ಯುತ್ತಿದ್ದ ವೇಳೆ, ಇಟ್ಟಂಗಿ ಬಟ್ಟಿ ಮಾಲೀಕ ಖೇಮು ರಾಠೋಡ ತಮ್ಮ ಜನರನ್ನು ಕರೆಯಿಸಿ, ಕಾರ್ಮಿಕರ ಕೈ, ಕಾಲು ಕಟ್ಟಿ, ಕಾಲ ಮೇಲೆ ನಿಂತು ಪೈಪ್ ನಿಂದ ಮನಬಂದಂತೆ, ಅಂಗಾಲು, ಬೆನ್ನು, ಸೊಂಟಕ್ಕೆ ಥಳಿಸಿದ್ದಾರೆ.
ತೀವ್ರ ಅಸ್ವಸ್ಥಗೊಂಡ ಕಾರ್ಮಿಕರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಕಾರ್ಮಿಕರನ್ನು ಅಮಾನುಷ್ಯವಾಗಿ ಥಳಿಸಿದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೆ.
ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.