ಹೊಸದಿಗಂತ ವರದಿ, ಧಾರವಾಡ:
ಸ್ಥಳೀಯ ಸತ್ತೂರಿನ ಡಾ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಶುಕ್ರವಾರ ಡಾ. ಪುನೀತ್ ರಾಜಕುಮಾರ ಹೆಸರಿನ ಹೃದಯ ಜ್ಯೋತಿ ದ್ವಿತೀಯ ಹಂತದ ಯೋಜನೆಗೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವ ದಿನೇಶ ಗುಂಡೂರಾವ್, ಹೃದಯಾಘಾತವಾದಲ್ಲಿ ತಕ್ಷಣ ಬಡವರಿಗೂ ಲಭ್ಯವಾಗುವ ರೀತಿಯಲ್ಲಿ ಎಲ್ಲ ತಾಲೂಕು, ಜಿಲ್ಲಾಸ್ಪತ್ರೆಗಳಲ್ಲಿ ರೂ.28 ಸಾವಿರ ಮೌಲ್ಯದ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ ಎಂದರು.
ಇಡೀ ಭಾರತದಲ್ಲ ಹೃದಯ ಜ್ಯೋತಿ ಮಾದರಿ ಯೋಜನೆ ಇದಾಗಿದೆ. ಈಗಾಗಲೇ ರಾಜ್ಯದ 15 ಜಿಲ್ಲೆಗಳು ಹಾಗೂ 71 ತಾಲೂಕಾ ಆಸ್ಪತ್ರೆಯಲ್ಲಿ ಈ ಯೋಜನೆ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಹೃದಯಾಘಾತವಾದ ತಕ್ಷಣ ಇಸಿಜಿ ಮಾಡುವ ಸ್ಟೆಮಿ ಕಿಟ್ ನೂ ಈ ಯೋಜನೆಯಡಿ ನೀಡಲಾಗುತ್ತಿದೆ. ಇಡೀ ದೇಶದಲ್ಲೇ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದಿಂದ ಈ ಯೋಜನೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್, ಶಾಸಕ ಎನ್.ಎಚ್.ಕೋನರೆಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಹೃದಯ ಸಂಬಂಧಿ ವೈದ್ಯರು ಸೇರಿ ಅನೇಕರು ಪಾಲ್ಗೊಂಡಿದ್ದರು.