ದಕ್ಷಿಣದ ರಾಜ್ಯಗಳಿಗೆ ಕೇಂದ್ರದಿಂದ ಅನ್ಯಾಯ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ವರದಿ, ಹಾಸನ:

ತೆರಿಗೆ ಹಣ ಹಂಚಿಕೆ ವಿಚಾರದಲ್ಲಿ ದಕ್ಷಿಣದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ನಮ್ಮ ಪಾಲನ್ನು ಕಸಿದುಕೊಂಡು ಮತ್ಯಾರಿಗೋ ಕೊಡುವ ನೀತಿ ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಾಣಾವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ಯಾಕ್ಸ್ ಹಂಚಿಕೆ ವಿಚಾರದಲ್ಲಿ ಆಂಧ್ರಪ್ರದೇಶ, ಕೇರಳ ಸರ್ಕಾರಕ್ಕೆ ಯಾವುದೇ ತೊಂದರೆ ಆಗದಿದ್ದರೂ ಕರ್ನಾಟಕ ಸರ್ಕಾರ ಅಪಪ್ರಚಾರ ಮಾಡುತ್ತಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು.

ಕೇರಳದವರು ದೆಹಲಿಗೆ ಯಾಕೆ ಹೋಗಿದ್ರು, ಅವರಿಗೆ ಬೆಂಬಲ ಮಾಡಿ ತಮಿಳುನಾಡಿನವರು ಏಕೆ ಹೋಗಿದ್ದರು, ದಕ್ಷಿಣದ ಎಲ್ಲ ರಾಜ್ಯಗಳಿಗೂ ಹೆಚ್ಚು ಅನ್ಯಾಯವಾಗಿದೆ. ನಾವು ಉತ್ತರದ ರಾಜ್ಯಗಳಿಗೆ ಕೊಡಬೇಡಿ ಎಂದು ಹೇಳಲಾಗದು. ಆದರೆ ನಮಗೆ ಅನ್ಯಾಯ ಮಾಡಿ ಅವರಿಗೆ ಕೊಡಬೇಡಿ ಎಂಬುದಷ್ಟೇ ನಮ್ಮ ವಾದ. ಕೇಂದ್ರಕ್ಕೆ ಬರುವ ಪಾಲಿನಲ್ಲಿ ಉತ್ತರದವರಿಗೆ ಕೊಡಲಿ. ಅದನ್ನು ಬಿಟ್ಟು ನಮ್ಮ ಪಾಲಿನಲ್ಲಿ ಏಕೆ ಕಿತ್ತು ಕೊಡುತ್ತೀರಿ ಎಂದು ಪ್ರಶ್ನಿಸಿದರು.

ಕರ್ನಾಟಕದಿಂದ ನೂರು ರೂಪಾಯಿ ತೆರಗಿ ಹಣ ಸಂಗ್ರಹ ಮಾಡಿದರೆ ನಮಗೆ ವಾಪಾಸ್ ಬರೋದು ಕೇವಲ ಹದಿಮೂರು ರೂಪಾಯಿ ಮಾತ್ರ. ಇದು ಯಾವ ನ್ಯಾಯ. ಇಂತಹ ಅನ್ಯಾಯ ನೋಡಿಕೊಂಡು ಸುಮ್ಮನಿರಲು ಹೇಗೆ ಸಾಧ್ಯ. ನಮ್ಮ ರಾಜ್ಯದ ಬಿಜೆಪಿಯವರು ಕೇಂದ್ರ ಸರ್ಕಾರ ಅನ್ಯಾಯ ಮಾಡುವುದನ್ನೇ ಸಮರ್ಥನೆ ಮಾಡಿಕೊಂಡು ಕನ್ನಡಿಗರಿಗೆ ದ್ರೋಹ ಮಾಡುತ್ತಿದ್ದಾರೆ. ಪಕ್ಷ ರಾಜಕಾರಣಕ್ಕೋಸ್ಕರ ಕೇಂದ್ರ ಸರ್ಕಾರ ಮಾಡುವ ಅನ್ಯಾಯವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಲೂಟಿ ಹೊಡೆದವರನ್ನು ಜನರೇ ತಿರಸ್ಕರಿಸಿದ್ದಾರೆ
ಹಿಂದು ದೇವಾಲಯಗಳ ಹಣವನ್ನು ಕಾಂಗ್ರೆಸ್‌ನವರು ಲೂಟಿ ಹೊಡೆಯಲು ಹೊರಟಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರುಗಳು ಲೂಟಿ ಹೊಡೆಯುತ್ತಿರುವ ಕಾರಣದಿಂದಲೇ ಜನ ತಿರಸ್ಕಾರ ಮಾಡಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು. ರಾಜ್ಯದ ಜನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲೂಟಿ ಹೊಡೆಯುವಲ್ಲಿ ನಿರತರಾಗಿದ್ದವರನ್ನು ತಿರಸ್ಕಾರ ಮಾಡಿ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಇದರ ಮೇಲೆ ನಾನು ಉತ್ತರ ಕೊಡುವ ಅವಶ್ಯಕತೆ ಏನಿದೆ ಎಂದರು.

ಅನಂತ ಕುಮಾರ್ ಹೆಗ್ಡೆಗೆ ತಿರುಗೇಟು
ಸಿದ್ರಾಮುಲ್ಲಾ ಖಾನ್ ನೇತೃತ್ವದ ಸರ್ಕಾರದಲ್ಲಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ ಎಂಬ ಸಂಸದ ಅನಂತ್ ಕುಮಾರ್ ಹೆಗ್ದೆ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೆ ಸಂಬಳ ಕೊಟ್ಟಿಲ್ಲ ಎಂದು ಯಾರಾದರೂ ಹೇಳಿದ್ದಾರಾ, ಅನಂತ್ ಕುಮಾರ್ ಹೆಗ್ಡೆ ಸಂವಿಧಾನ ಬದಲಾವಣೆ ಮಾಡಲು ಬಂದವರು. ಲೋಕಸಭಾ ಸದಸ್ಯರಾಗಲು ಅವರು ಲಾಯಕ್ಕಾದವರಲ್ಲ. ಅಂತಹವರು ಇಂತಹ ಹೇಳಿಕೆ ಕೊಟ್ಟರೆ ಯಾವ ಕಿಮ್ಮತ್ತು ಇರುತ್ತದೆ ಎಂದರು.

ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು ಎಂದಿದ್ದರು. ಸಂಸತ್ತು ಮತ್ತು ನ್ಯಾಯಾಲಯಗಳಿಗೆ ಜನರೇ ಮಾಲೀಕರು ಎಂದು ಅಬ್ರಹಾಂ ಲಿಂಕನ್ ಹೇಳಿದ್ದಾರೆ. ಆದರೆ ಸಂವಿಧಾನ ಕಿತ್ತೊಗೆಯಿರಿ ಎಂದು ಯಾರೂ ಹೇಳಿಲ್ಲ. ಯಾರು ಸಂವಿಧಾನವನ್ನು ತಿರುಚುತ್ತಾರೆ ಅವರನ್ನೇ ಕಿತ್ತು ಎಸೆಯಿರಿ ಎಂದು ಹೇಳಬೇಕಿದೆ. ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಲೋಕಸಭಾ ಸದಸ್ಯರಾಗಲು ಯೋಗ್ಯರಲ್ಲ. ಕಾಮಾಲೆ ರೋಗದವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಮಾತನಾಡಿ ಮುಸಲ್ಮಾರನ್ನು ವಿರೋಧ ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸಿದ್ರಾಮುಲ್ಲಾ ಖಾನ್ ಎಂದು ಕರೆಯುವವರು ಅಲ್ಪಸಂಖ್ಯಾತರ ಧರ್ಮಕ್ಕೆ ವಿರುದ್ಧವಾಗಿರುವವರು. ಇದೇ ಕಾರಣಕ್ಕೆ ಅವರು ನನಗೆ ಏನೆಲ್ಲ ಹೆಸರಿಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಗೃಹ ಮಂಡಳಿ ಅಧ್ಯಕ್ಷರಾದ ಶಾಸಕ ಕೆ.ಎಂ.ಶಿವಲಿoಗೇಗೌಡ ಇತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!