ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ, ಬಜೆಟ್‌ನಲ್ಲಿ ಏನನ್ನೂ ನೀಡಿಲ್ಲ ಎಂದು ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದಾರೆ. ಇದು ಸಂಪೂರ್ಣ ಸುಳ್ಳು, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ತಿರುಗೇಟು ನೀಡಿದರು.
ಯುಪಿಎ ಸರ್ಕಾರ ಇದ್ದಾಗ ರಾಜ್ಯಕ್ಕೆ 81,791 ಕೋಟಿ ರೂ. ನೀಡಿತ್ತು. ಆದರೆ 2014ರಿಂದ ಇಲ್ಲಿಯವರೆಗೆ ಎನ್ಡಿಎ ಸರ್ಕಾರ 2,95,818 ಕೋಟಿ ರೂಪಾಯಿ ನೀಡಿದೆ. ಕಳೆದ 10 ವರ್ಷದಲ್ಲಿ 2,36,955 ಕೋಟಿ ತೆರಿಗೆ ಹಂಚಿಕೆಯಾಗಿದೆ ಎಂದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಜೆಟ್‌ನಲ್ಲಿ ಸ್ಟಾರ್ಟಪ್‌ಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಕೇಂದ್ರ ಬಜೆಟ್‌ನಲ್ಲಿ ನಾವು ಯುವಕರಿಗಾಗಿ ಮೂರು ಕಾರ್ಯಕ್ರಮಗಳನ್ನು ಸೇರಿಸಿದ್ದೇವೆ. ಯುವಕರು ತರಬೇತಿ, ಇಂಟರ್ನ್‌ಶಿಪ್ ಕಾರ್ಯಕ್ರಮಗಳಿಗೆ ಒಳಗಾಗುತ್ತಾರೆ ಮತ್ತು ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತಾರೆ. ಎಂಎಸ್‌ಎಂಇಗಳು ಸವಾಲನ್ನು ಎದುರಿಸುತ್ತಿವೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಕೇಂದ್ರ ಬಜೆಟ್‌ನಲ್ಲಿ ಉತ್ತರವನ್ನು ನೀಡಿದ್ದೇವೆ. ಬೆಂಗಳೂರು ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. ಆವಾಸ್ ಕಾರ್ಯಕ್ರಮದಡಿ ಬಡವರಿಗೆ ಮನೆ ನೀಡಲಾಗುತ್ತದೆ.
ಕೇಂದ್ರದಿಂದ ಮಹಿಳೆಯರಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ಕಾರ್ಯಕ್ರಮವನ್ನೂ ತಂದಿದ್ದೇವೆ. ಈ ಎಲ್ಲ ಯೋಜನೆಗಳಿಂದ ಕರ್ನಾಟಕಕ್ಕೂ ಲಾಭವಾಗಲಿದೆ ಎಂದರು.