ರಾಜ್ಯದಲ್ಲಿ ಮಹಿಳೆಯರ ರಕ್ಷಣೆಗಾಗಿ ವಿನೂತನ ಕಾರ್ಯಕ್ರಮ: ಸಿಎಂ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ದೇಶ ಕಟ್ಟಲು ಆರ್ಥಿಕ ಅಭಿವೃದ್ಧಿ ಎಷ್ಟು ಮುಖ್ಯವೋ ಅಷ್ಟೇ ಸ್ಪೂರ್ತಿಯೂ ಮುಖ್ಯ. ಒನಕೆ ಓಬವ್ವ ಅಂದ್ರೆ ಶಕ್ತಿಯ ಪ್ರತೀಕ. ಓಬವ್ವನ ಪರಾಕ್ರಮದಿಂದ ಆಕೆಯ ಹೆಸರು ಹೇಳಿದರೆ, ಮಕ್ಕಳು ಕೂಡ ಶಕ್ತಿ ಪಡೆಯುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಇಂದು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳು ಮತ್ತು ಕ್ರೈಸ್ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ‘ಓಬವ್ವ ಆತ್ಮ ರಕ್ಷಣಾ ಕಲೆ ತರಬೇತಿ’ ಕಾರ್ಯಕ್ರಮ ಉದ್ಘಾಟಿಸಿದರು.

ಆತ್ಮ ರಕ್ಷಣೆ ಪ್ರತಿಯೊಂದು ಜೀವ ಸಂಕುಲದ ಗುಣಧರ್ಮ. ನಮ್ಮ ರಕ್ಷಣೆಯನ್ನು ಮೊದಲು ನಾವು ಮಾಡಿಕೊಳ್ಳಬೇಕು. ನಂತರ ವ್ಯವಸ್ಥೆ, ಸಮಾಜ, ಸರಕಾರ ಎಲ್ಲವೂ ಇರುತ್ತದೆ. ಆತ್ಮ ರಕ್ಷಣೆಗೆ ಪ್ರಮುಖವಾಗಿ ಅವಶ್ಯವಿರುವುದು ಆತ್ಮವಿಶ್ವಾಸ. ಆತ್ಮವಿಶ್ವಾಸವಿರುವವರು ಸಮರ್ಥವಾಗಿ ಆತ್ಮರಕ್ಷಣೆ ಮಾಡಲು ಸಾಧ್ಯ. ವಿದ್ಯಾರ್ಥಿನಿಯರು ಆತ್ಮವಿಶ್ವಾಸದಿಂದ ಪಡೆದಿರುವ ಈ ತರಬೇತಿಯು, ಆತ್ಮರಕ್ಷಣೆಗೆ ಎದುರಾಳಿಗಳನ್ನು ನಾನು ಸಮರ್ಥವಾಗಿ ಎದುರಿಸಬಲ್ಲೆ ಎನ್ನುವ ಶಕ್ತಿ ತುಂಬುವ ಟಾನಿಕ್. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲಾಣ್ಯ ಇಲಾಖೆಯ ಸಚಿವರು, ಅಧಿಕಾರಿಗಳು, ಶಾಲೆಯ ಮುಖ್ಯಸ್ಥರೆಲ್ಲ ಈ ಟಾನಿಕ್ ನೀಡುತ್ತಿದ್ದಾರೆ ಎಂದರು.

ದಿನನಿತ್ಯ ಬಳಸುವ ವಸ್ತುವೂ ಪ್ರೇರಣೆ:
ಈ ಕಾರ್ಯಕ್ರಮದ ಹೆಸರಿನಲ್ಲಿಯೇ ಆ ಶಕ್ತಿಯನ್ನು ತುಂಬಬೇಕೆಂದು ಒನಕೆ ಓಬವ್ವನ ಹೆಸರಿಟ್ಟಿದ್ದಾರೆ. ಒನಕೆ ಓಬವ್ವ ಶೂರತನದ ಬಗ್ಗೆ ನಮಗೆಲ್ಲ ಗೊತ್ತಿದೆ. ಒನಕೆ ಓಬವ್ವ ಅಂದ್ರೆ ಶಕ್ತಿಯ ಪ್ರತೀಕ. ಪುರುಷರನ್ನೂ ಮೀರಿಸಬಲ್ಲ ಶೌರ್ಯತ್ವವನ್ನು ಇಲ್ಲಿನ ಮಹಿಳೆಯರು ತೋರಿಸಿದ್ದಾರೆ. ನಮಗೆಲ್ಲ ಸ್ಪೂರ್ತಿ ಪ್ರೇರಣೆಯಾಗಿದ್ದಾರೆ. ಕಾಳುಕಡಿ ಕುಟ್ಟಿ ಪುಡಿಮಾಡುವ ಒನಕೆ ಬಳಸುವ ಮೂಲಕ ನಾವು ನಮ್ಮ ಆತ್ಮರಕ್ಷಣೆಗೆ ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ಕೂಡ ಬಳಸಬಹುದು ಎಂಬ ಸಂದೇಶ ಒನಕೆ ಓಬವ್ವ ನಮಗೆ ನೀಡಿದ್ದಾರೆ. ಆ ಪ್ರೇರಣೆ ಎಲ್ಲರಿಗೂ ಸಿಗಲಿ ಎಂದು ಹಾರೈಸಿದರು.

ಪೊಲೀಸ್ ಶಾಲೆಗಳಲ್ಲಿ ಆತ್ಮರಕ್ಷಣಾ ತರಬೇತಿ:
ಸಮಾಜದಲ್ಲಿ ಮಹಿಳೆಯರಿಗೆ ಪೂಜ್ಯ ಸ್ಥಾನ, ಗೌರವವಿದೆ. ಆದರೆ ಕೆಲವು ಕಿಡಿಗೇಡಿಗಳು, ದುಷ್ಟಶಕ್ತಿಗಳು ತಾಯಂದಿರು, ಮಕ್ಕಳನ್ನು ನೋಡುವ ರೀತಿ ಅಮಾನುಷವಾಗಿದೆ. ಇದಕ್ಕೆ ಹಲವಾರು ಅಮಾಯಕ ಹೆಣ್ಣುಮಕ್ಕಳು ಬಲಿಯಾಗಿದ್ದಾರೆ. ಇದನ್ನು ತಡೆಗಟ್ಟುವುದಕ್ಕೆ ಕಾನೂನು, ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರಾಜ್ಯದಲ್ಲಿರುವ 12 ಪೊಲೀಸ್ ತರಬೇತಿಯ ಶಾಲೆಗಳನ್ನು ಮಹಿಳಾ ಆತ್ಮರಕ್ಷಣಾ ತರಬೇತಿಗೆ ಳಕೆ ಮಾಡಬೇಕೆಂದು ಗೃಹ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ. ಆದಷ್ಟು ಶೀಘ್ರದಲ್ಲಿ ಆ ಕೇಂದ್ರಗಳಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ವಿಶೇಷ ತರಬೇತಿ ನೀಡಿ, ಆತ್ಮರಕ್ಷಣೆಗೆ ಸನ್ನದ್ಧವಾಗಿಸಬೇಕು. ಆತ್ಮವಿಶ್ವಾಸ ಮತ್ತು ಆತ್ಮರಕ್ಷಣೆ ಕಲೆ ಮಹಿಳೆಯರಿಗೆ ಇದ್ದರೆ, ದುಷ್ಟಶಕ್ತಿಗಳಿಗೆ ಸರಿಯಾದ ಪಾಠ ಕಲಿಸಬಹುದೆಂಬ ವಿಶ್ವಾಸ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

ಕಾನೂನು, ಶಿಕ್ಷಣ, ಗೃಹ ಇಲಾಖೆಗಳು, ಸಮಾಜ, ಸರಕಾರ ಎಲ್ಲರೂ ಒಗ್ಗಟ್ಟಾಗಿ ಮಹಿಳೆಯರ ಆತ್ಮರಕ್ಷಣೆ ಮಾತ್ರವಲ್ಲ, ಅವರ ಗೌರವದ ರಕ್ಷಣೆಯನ್ನೂ ಮಾಡಬೇಕು. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ, ಇಲ್ಲಿ ಮಹಿಳೆಯರ ರಕ್ಷಣೆಯೂ ಉತ್ತಮವಾಗಬೇಕು. ಮಹಿಳಾ ರಕ್ಷಣೆಯನ್ನು ಕ್ರೋಢೀಕರಿಸಿ ಸರಕಾರ ವಿನೂತನ ಯೋಜನೆಯನ್ನು ನಾವು ರೂಪಿಸುತ್ತೇವೆ. ಮಹಿಳೆಯರ ಸ್ವಾವಲಂಬನೆಯಿಂದ ದೇಶದ ಜಿಡಿಪಿ ಹೆಚ್ಚುತ್ತದೆ, ಸಾಂಸ್ಕೃತಿಕ ಲೋಕ ಶ್ರೀಮಂತವಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕಕ್ಕೆ ಅಗ್ರಮಾನ್ಯ ಸ್ಥಾನ:
ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ನಗರದವರೆಗೆ ಹಲವು ಕಾರ್ಯಕ್ರಮನ್ನು ಹಮ್ಮಿಕೊಂಡಿದ್ದೇವೆ. ಕರ್ನಾಟಕ ರಾಜ್ಯೋತ್ಸವ ಅಮೃತಮಹೋತ್ಸವ ಸಂದರ್ಭದಲ್ಲಿ ರಾಜ್ಯದ ಸ್ಥಾನ ದೇಶದಲ್ಲಿ ನಂ.1 ಆಗಿರಬೇಕು. ಇದಕ್ಕಾಗಿ ನಮ್ಮ ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೂ ವಿದ್ಯೆ ಮತ್ತು ಕೆಲಸ ಮಾಡುವ ಅವಕಾಶವನ್ನು ಸರಕಾರ ಮಾಡಿಕೊಡಲಿದೆ. ಹೀಗಾಗಿ ಐತಿಹಾಸಿಕ ಪುರುಷರನ್ನು ನೆನಪಿಸುವ ಕೆಲಸ ಸರಕಾರ ಮಾಡುತ್ತದೆ ಎಂದರು.

ಆತ್ಮರಕ್ಷಣಾ ಯೋಜನೆಗಳಿಗೆ ದೊಡ್ಡ ಅಡಿಪಾಯವನ್ನು ಇಂದು ಹಾಕಲಾಗಿದೆ. ಓಬವ್ವ ಆತ್ಮರಕ್ಷಣೆ ತಲೆ ತರಬೇತಿ ಯೋಜನೆಯ ಮೂಲಕ ಮುನ್ನುಡಿ ಬರೆಯಲಾಗಿದೆ. ಕೆಳದಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮನ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಆತ್ಮ ರಕ್ಷಣೆಗೆ ತಾವು ಕಲಿತ ವಿದ್ಯೆಯನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಶಾಸಕರಾದ ಎನ್. ರವಿಕುಮಾರ, ಮುನಿರಾಜುಗೌಡ ಮತ್ತು ಮಾಜಿ ಶಾಸಕ ಛಲವಾದಿ ನಾರಾಯಣ ಸ್ವಾಮಿ, ನಿವೃತ್ತ ಅಧಿಕಾರಿ ವೆಂಕಟಯ್ಯ, ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!