ಹೊಸದಿಗಂತ ವರದಿ,ಅಂಕೋಲಾ:
ಕೇಂದ್ರ ಸಂಸ್ಕೃತಿ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಕದಂಬ ನೌಕಾನೆಲೆಯಲ್ಲಿ ಐಎನ್ಎಸ್ ಕೌಂಡಿನ್ಯ ನೌಕೆಯನ್ನು ಲೋಕಾರ್ಪಣೆಗೊಳಿಸಿದರು.
ಐದನೇ ಶತಮಾನದ ಪುರಾತನ ತಂತ್ರಜ್ಞಾನ ಬಳಸಿ ಗೋವಾದ ಕಂಪನಿಯೊಂದು ಈ ಹಡಗನ್ನು ಕಟ್ಟಿದ್ದು ಮರದ ಹಲಗೆಗಳನ್ನು ಬಳಸಿ ತೆಂಗಿನ ಕಾಯಿಯ ಕತ್ತದ ನಾರು ಹಗ್ಗದಿಂದ ಹೆಣೆಯಲಾದ ಹಡಗಿನ ಪರೀಕ್ಷೆಯನ್ನು ಭಾರತೀಯ ನೌಕಾಪಡೆ ಹಾಗೂ ಸಾಗರ ಇಂಜಿನಿಯರಿಂಗ್ ವಿಭಾಗದ ತಜ್ಞರು ನಡೆಸಿದ್ದಾರೆ.
ಅಜಂತಾ ಗುಹೆಯಲ್ಲಿರುವ ವರ್ಣಚಿತ್ರವನ್ನು ಆಧಾರವಾಗಿರಿಸಿ ನಿರ್ಮಾಣ ಮಾಡಲಾಗಿರುವ ಕೌಂಡಿನ್ಯ ಹಡಗನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ನೌಕಾಸೇನೆಯ ನಡುವಿನ ಒಪ್ಪಂದದ ಮೂಲಕ ನಿರ್ಮಾಣ ಮಾಡಲಾಗಿದ್ದು ತಜ್ಞ ಬಾಬು ಶಂಕರನ್ ಅವರ ನೇತೃತ್ವದಲ್ಲಿ ಕುಶಲಕರ್ಮಿಗಳು ಕೇರಳದಿಂದ ತರಿಸಿದ ಕಚ್ಚಾ ಸಾಮಗ್ರಿಗಳನ್ನು ಬಳಸಿ ನಿರ್ಮಾಣ ಮಾಡಿದ್ದಾರೆ.
ಕೈ ಹೊಲಿಗೆಯ ಮೂಲಕ ಈ ಹಡಗಿನ ಸಂದುಗಳನ್ನು ಜೋಡಿಸಿರುವುದು ವಿಶೇಷವಾಗಿದ್ದು ಕೌಂಡಿನ್ಯ ಹಡಗು ಪ್ರಾಚೀನ ಭಾರತದ ನೌಕಾ ವ್ಯವಸ್ಥೆಯ ದ್ಯೋತಕವಾಗಲಿದೆ.
ಐ.ಎನ್. ಎಸ್ ಕೌಂಡಿನ್ಯ ಗುಜರಾತ್ ಮೂಲಕ ಓಮನ್ ಗೆ ತನ್ನ ಮೊದಲ ಕಡಲಯಾನ ನಡೆಸಲಿದೆ.