ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾಲ್‌ಬಾಗ್‌ನಲ್ಲಿ ಹೊಸ ಕೆಫೆಯೊಂದು ಆರಂಭವಾಗಿದೆ. ನಾವು ನೀವು ಅಂದುಕೊಂಡಂಥ ಕೆಫೆ ಅಲ್ಲ, ಇದು ಇನ್ಸೆಕ್ಟ್ಸ್ ಕೆಫೆ.. ಕೀಟಗಳ ಕೆಫೆ..
ಇಡೀ ರಾಜ್ಯದಲ್ಲಿ ಬಿಸಿಲಿನ ಝಳಕ್ಕೆ ಪಕ್ಷಿಗಳು ಸುಸ್ತುಬಿದ್ದಿವೆ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದ್ದು, ಅವುಗಳನ್ನು ಹೆಚ್ಚಳ ಮಾಡುವ ಸಲುವಾಗಿ ಲಾಲ್‌ಬಾಗ್ ತೋಟಗಾರಿಕಾ ಅಧಿಕಾರಿಗಳು ಹೊಸ ಕೆಫೆ ಆರಂಭಿಸಿದ್ದಾರೆ.
ಪಕ್ಷಿಗಳ ಸಂತಾನೋತ್ಪತ್ತಿ ಹೆಚ್ಚಿಸುವ ದೃಷ್ಟಿಯಿಂದ ಇಲಾಖೆ ಕ್ರಮ ಕೈಗೊಂಡಿದ್ದು, ಹೊಸ ಪ್ರಯತ್ನ ಮಾಡಿದೆ. ಇನ್ಸೆಕ್ಟ್ಸ್ ಕೆಫೆ ಎಂದರೆ ಮರದ ರೆಂಬೆ ಕೊಂಬೆಗಳ ಪುಟಾಣಿ ಮನೆ.
ಇದರಲ್ಲಿ ಕ್ರಿಮಿ ಕೀಟಗಳು, ನೆರಳು, ನೀರು ಎಲ್ಲ ಇದೆ. ಈ ಕೀಟಗಳನ್ನು ತಿನ್ನಲು ಪಕ್ಷಿಗಳು ಬರುತ್ತವೆ. ಹಾಗೇ ಮೊಟ್ಟೆ ಇಡಲೂ ಈ ಜಾಗ ಸುರಕ್ಷಿತ ಎಂದು ತಿಳಿದುಕೊಳ್ಳುತ್ತವೆ. ಲಾಲ್‌ಬಾಗ್‌ನಲ್ಲಿ ಒಟ್ಟಾರೆ ಎಂಟು ಕಡೆ ಈ ರೀತಿ ಇನ್ಸೆಕ್ಟ್ಸ್ ಕೆಫೆ ಮಾಡಲಾಗಿದೆ.
ಲಾಲ್‌ಬಾಗ್‌ನಲ್ಲೇ ಸಂಗ್ರಹವಾಗುವ ತ್ಯಾಜ್ಯವನ್ನು ಸೇರಿಸಿ ಈ ಕೆಫೆ ಮಾಡಲಾಗಿದೆ. ಒಂದೊಂದು ಕೆಫೆಗೆ ೪೦-೫೦ ಸಾವಿರ ರೂಪಾಯಿ ಖರ್ಚಾಗಿದೆ. ಈ ಹೊಸ ನಡೆ ಪಕ್ಷಿ ಪ್ರೇಮಿಗಳಿಗೆ ಸಂತಸ ನೀಡಿದ್ದು, ಪರಿಸರ ಪ್ರೇಮಿಗಳಿಗೂ ಖುಷಿ ನೀಡಿದೆ.