ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಮೌಳಿ ನಿರ್ದೇಶಿಸಿ ಜೂ ಎನ್ಟಿಆರ್ ಮತ್ತು ರಾಮ್ ಚರಣ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ‘RRR’ ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿತು. ಬಾಕ್ಸ್ ಆಫೀಸ್ ಯಶಸ್ಸಿನ ಜೊತೆಗೆ ಆಸ್ಕರ್ ಅಂಗಳಕ್ಕೂ ಹೋಗಿ, ‘ನಾಟು ನಾಟು’ ಹಾಡಿಗೆ ಆಸ್ಕರ್ ಸಹ ಗೆದ್ದಿತು. ‘RRR’ ಸಿನಿಮಾ ಮೂಲಕ ಮತ್ತೊಮ್ಮೆ ವಿಶ್ವದ ಚಿತ್ರರಂಗ ಭಾರತದ ಕಡೆಗೆ ತಿರುಗಿ ನೋಡುವಂತಾಯ್ತು. ಜೇಮ್ಸ್ ಕ್ಯಾಮರನ್, ಸ್ಟಿವನ್ ಸ್ಪೀಪ್ಬರ್ಗ್ ಅಂಥಹಾ ದಿಗ್ಗಜ ನಿರ್ದೇಶಕರು ‘RRR’ ಸಿನಿಮಾವನ್ನು ಮೆಚ್ಚಿ ಕೊಂಡಾಡಿದರು. ವಿದೇಶದಲ್ಲಿ ಈ ಸಿನಿಮಾ ಭಾರಿ ಯಶಸ್ಸು ಗಳಿಸಿತು. ಭಾರತ ಚಿತ್ರರಂಗದ ಪಾಲಿಗೆ ಅತ್ಯಂತ ಪ್ರಮುಖ ಸಿನಿಮಾ ಆಯ್ತು ‘RRR’ ಇದೀಗ ಈ ಸಿನಿಮಾದ ಡಾಕ್ಯುಮೆಂಟರಿ ನಿರ್ಮಾಣ ಆಗಲಿದೆ.
ಸಿನಿಮಾ ಶೂಟಿಂಗ್ ಹೇಗೆ ಆಗುತ್ತದೆ? ಶೂಟಿಂಗ್ ವೇಳೆ ಏನೆಲ್ಲಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ? ಎಷ್ಟೆಲ್ಲಾ ಶ್ರಮ ಇದೆ, ಒಳಗಿನ ಗಾಸಿಪ್ ಏನು ಎಂದು ತಿಳಿದುಕೊಳ್ಳುವ ಕುತೂಹಲ ಡಾಕ್ಯುಮೆಂಟರಿ ಮೂಲಕ ಕೊನೆಯಾಗಲಿದೆ.
‘RRR: ಬಿಹೈಂಡ್ ಆಂಡ್ ಬಿಯಾಂಡ್’ ಹೆಸರಿನ ಡಾಕ್ಯುಮೆಂಟರಿ ನೆಟ್ಫ್ಲಿಕ್ಸ್ನಲ್ಲಿ ಇದೇ ತಿಂಗಳು ಬಿಡುಗಡೆ ಆಗಲಿದೆ. ಈಗಾಗಲೇ ಡಾಕ್ಯುಮೆಂಟರಿಯ ಪೋಸ್ಟರ್ ಬಿಡುಗಡೆ ಆಗಿದ್ದು, ಸಿನಿಮಾ ಟೇಪ್ಗಳ ನಡುವೆ ರಾಜಮೌಳಿ ಕುಳಿತಿರುವ ಚಿತ್ರವನ್ನು ಪೋಸ್ಟರ್ನಲ್ಲಿ ಬಳಸಲಾಗಿದೆ. ‘ವೈಭವವನ್ನು ವಿಶ್ವ ನೋಡಿದೆ, ಈಗ ಅದರ ಹಿಂದಿನ ಕತೆಯನ್ನು ನೋಡಲಿದೆ’ ಎಂದು ಕ್ಯಾಪ್ಷನ್ ನೀಡಲಾಗಿದೆ. ‘RRR’ ಸಿನಿಮಾ ಡಾಕ್ಯುಮೆಂಟರಿಯಲ್ಲಿ ಸಿನಿಮಾದ ಕತೆ ಹುಟ್ಟಿದ ಬಗೆ, ಚಿತ್ರೀಕರಣಕ್ಕೆ ಮಾಡಿಕೊಂಡ ತಯಾರಿ, ಕತೆ ಬೆಳೆದ ರೀತಿ, ಕೋವಿಡ್ನಿಂದ ಆದ ಹಿನ್ನಡೆ, ಆ ನಂತರ ಮತ್ತೆ ಚಿತ್ರೀಕರಣ ಶುರುವಾಗಿದ್ದು, ಸಿನಿಮಾ ಚಿತ್ರೀಕರಣದಲ್ಲಿ ಎದುರಾದ ಸಮಸ್ಯೆಗಳು ಇನ್ನೂ ಹಲವು ವಿಷಯಗಳನ್ನು ಸ್ವತಃ ರಾಜಮೌಳಿ ಮತ್ತು ಸಿನಿಮಾದ ತಂಡ ಬಿಚ್ಚಿಡಲಿದೆ.