ಮೇಘನಾ ಶೆಟ್ಟಿ ಶಿವಮೊಗ್ಗ
ಅಮ್ಮ ಹೇಳ್ತಾಳೆ, ʼಬಾರೋ ಪೂರಿ ಸಾಗು ಮಾಡಿದಿನಿ ತಿನ್ನು..ʼ ಅದಕ್ಕೆ ಮಗ ʼಏ ಜಿಮ್‌ಗೆ ಹೋಗಿ ಬಂದು ಯಾವನಾದ್ರೂ ಪೂರಿ ಸಾಗು ತಿಂತಾರಾ?ʼ ಮತ್ತೆ ಅಮ್ಮ ಕೇಳ್ತಾಳೆ” ಜಿಮ್‌ಗೂ ಪೂರಿ ಸಾಗುಗೂ ಏನ್ ಸಂಬಂಧ?”
ಕ್ಷಣವೂ ಯೋಚಿಸದೆ ಮಗ ಹೇಳ್ತಾನೆ, ʼಏ ಹೋಗಮ್ಮ ನಿಂಗೇನೂ ಅರ್ಥ ಆಗಲ್ಲʼ..
ರೂಮಿನ ಮೂಲೆಲಿ ಕೂತು ಕ್ಷಣಕ್ಷಣಕ್ಕೂ ಫೋನ್ ನೋಡ್ತಿದ್ದ ಮಗಳಿಗೆ ಅಮ್ಮ ಕೇಳ್ತಾಳೆ” ಇಷ್ಟ ಇದ್ರೆ ನೀನಾಗೇ ಮಾತಾಡ್ಸೆ, ಸುಮ್ನೆ ಮೊಬೈಲ್ ನೋಡ್ತಾ ಕೂತಿದ್ರೆ ಮೆಸೇಜ್ ಬರಲ್ಲ” ಅಂತ. ಅದಕ್ಕೆ ಮಗಳು ” ಸುಮ್ನಿರಮ, ನಾನಾಗೇ ಯಾಕೆ ಮೆಸೇಜ್ ಮಾಡ್ಬೇಕು ಅವ್ನಿಗೆ, ಅವ್ನೇ ಮಾಡ್ಲಿ” ಅಮ್ಮ ಮತ್ತೆ ಉತ್ತರ ಕೊಡೋಕೂ ಮುಂಚೆಯೇ” ಸುಮ್ನಿರಮ ಈ ವಿಷ್ಯಕ್ ಬರ್ಬೇಡ ನಿಂಗೇನು ಅರ್ಥ ಆಗಲ್ಲ” ಅಂತ..
ಇದು ಒಬ್ಬಿಬ್ಬ ಅಮ್ಮ ಮಕ್ಕಳ ಕಥೆ ಅಲ್ಲ, ಆಲ್‌ಮೋಸ್ಟ್ ಎಲ್ಲರದ್ದೂ, ಎಕ್ಸ್‌ಪ್ಲೇನ್ ಮಾಡೋಕೆ ಟೈಮ್ ಆಗತ್ತೆ ಅಂತಲೋ, ಎಕ್ಸ್‌ಪ್ಲೇನ್ ಮಾಡಿದಮೇಲೆ ಅವರು ಕೊಂಕು ಮಾತನಾಡುತ್ತಾರೆ ಅಂತಲೋ ಅಥವಾ ಅರ್ಥವೇ ಆಗೋದಿಲ್ಲ ಸುಮ್ಮನೆ ಯಾಕೆ ಮಾತು ಅಂತಲೋ ಮಕ್ಕಳು ಸುಮ್ಮನಾಗಿಬಿಡುತ್ತಾರೆ. ಹೀಗೆ ತಾಯಿ/ತಂದೆ ಹಾಗೂ ಮಕ್ಕಳ ಮಧ್ಯೆ ಗೋಡೆ ಎದ್ದೇಳೋದು. ಕಷ್ಟವೋ, ಕೊಂಕೋ, ಟೈಮ್‌ವೇಸ್ಟೋ ಹೇಳೋ ರೀತಿಲಿ, ಹೇಳೋ ಟೋನ್‌ನಲ್ಲಿ ಒಂದು ಬಾರಿ ಅರ್ಥ ಮಾಡಿಸಿ ನೋಡಿ..ನೀವು ಹುಡುಕುತ್ತಿರುವ ಪ್ರಶ್ನೆಗಳಿಗೆ ಉತ್ತರ ಅವರ ಬಳಿಯೇ ಇರಲಿದೆ.
ಅವರಿಗೆ ಹೇಳೋ ಮೊದಲು ನೀವೇ ಅರ್ಥ ಮಾಡ್ಕೊಳಿ..
ಅವರಿಗೆ ಹೇಗೆ ಹೇಳಬಹುದು, ಹೇಗೆ ಅರ್ಥ ಮಾಡಿಸಬಹುದು, ಈಗ ಅವರಿಗೆ ಏನು ಅನಿಸ್ತಾ ಇದೆ, ಮುಂದೆ ಏನು ಅನಿಸಬಹುದು, ನೀವೇ ಅನಲೈಸ್ ಮಾಡಿ ಅವರಿಗೆ ಅರ್ಥ ಆಗುವ ಪದಗಳನ್ನು ಹಾಕಿ.
ಜಾಸ್ತಿ ಏನು ಬೇಡ ಕೇಳಿಸ್ಕೋಳ್ಳಿ ಸಾಕು..
ವಿದ್ಯೆ ರೀತಿ ಅನುಭವ ಅನ್ನೋದು ಕೂಡ ದೊಡ್ಡದೇ, ಅವರಿಗೆ ನಿಮ್ಮಷ್ಟು ವಿದ್ಯೆ ಇಲ್ಲದೆ ಇರಬಹುದು. ಈಗಿನ ಟ್ರೆಂಡ್ ಗೊತ್ತಿಲ್ಲದೆ ಇರಬಹುದು, ಬಟ್ ರಿಯಲ್ ಲೈಫ್ ಚಾಲೆಂಜ್‌ಗಳನ್ನು ಅವರು ಗೆದ್ದಿದ್ದಾರೆ. ಸೋತಿದ್ದರೂ ಅದರ ಅನುಭವ ನಿಮಗಿಂತ ಹೆಚ್ಚೇ ಇದೆ. ಅವರ ಮಾತುಗಳನ್ನು ಆಲಿಸಿ, ನಿಮ್ಮ ಒಳ್ಳೆಯದೇ ಅದರಲ್ಲಿ ಅಗಡಿದೆ ಅನ್ನೋದು ಅರ್ಥ ಆಗುತ್ತದೆ.
ಬರೀ ಫ್ಯಾಕ್ಟ್ ನೋಡಿದ್ರೆ ಫೀಲಿಂಗ್ಸ್ ಗತಿ..
ಕೆಲವೊಮ್ಮೆ ಅವರ ಪ್ರೀತಿ ನಿಮ್ಮನ್ನು ಉಸಿರುಗಟ್ಟಿಸಬಹುದು, ಆದರೆ ಎಷ್ಟೋ ಮಂದಿ ಒಂದು ಪ್ರೀತಿಯ ಅಪ್ಪುಗೆಗಾಗಿ ಹಪಹಪಿಸುತ್ತಾರೆ. ಇದನ್ನು ಅರ್ಥಮಾಡಿಕೊಳ್ಳಿ. ಏನನ್ನಾದರೂ ಮರಳಿ ಪಡೆಯಬಹುದು, ಆದರೆ ತಂದೆ ತಾಯಿ ಒಮ್ಮೆ ಹೋದರೆ ಮತ್ತೆ ಬರೋದಿಲ್ಲ. ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ.
ರಕ್ತ ಸಂಬಂಧ ಬದಲಾಗೋದಿಲ್ಲ, ಅಡ್ಜಸ್ಟ್ ಆಗಬಹುದಷ್ಟೇ..
ಹುಟ್ಟಿನಿಂದ ನಿಮ್ಮ ಜೊತೆ ಬಂದ ಅಪ್ಪ ಅಮ್ಮ ಅಜ್ಜಿ ತಾತ ಯಾರೇ ಆಗಿರಲಿ. ಅವರ ದಿನಚರಿ, ಬುದ್ಧಿಯನ್ನು ಬದಲಾಯಿಸೋಕೆ ಆಗೋದಿಲ್ಲ. ಅವರು ಕೆಟ್ಟವರೇ ಆದರೂ ಅದನ್ನು ನೀವು ಒಪ್ಪಿಕೊಳ್ಳಿ. ಅವರನ್ನು ಬದಲಾಯಿಸಲು ಆಗುವುದಿಲ್ಲ. ನೀವೇ ಅಡ್ಜಸ್ಟ್ ಆಗಿ. ಸಂದರ್ಭಕ್ಕೆ ತಕ್ಕಂತೆ ನಿಮ್ಮ ನಡೆನುಡಿಯಿಂದ ಅವರೇ ಕಲಿಯುವ ರೀತಿ ನಡೆದುಕೊಳ್ಳಿ.
ಎಷ್ಟೇ ಕೂಗಾಡಿದ್ರೂ ನಿಮ್ಮನ್ನು ಪ್ರೊಟೆಕ್ಟ್ ಮಾಡೋಕಷ್ಟೆ..
ಈಗ ನೀವೇ ಒಂದು ಪೆನ್ಸಿಲ್ ಕದ್ದುಕೊಂಡು ಬಂದಿದ್ದೀರಿ ಎಂದುಕೊಳ್ಳಿ. ನಾಳೆ ಶಾಲೆಯಲ್ಲಿ ಟೀಚರ್ ಕರೆಸಿ ಕೇಳಿದ್ರೆ ಇಲ್ಲ ಮಗ ಪೆನ್ಸಿಲ್ಲ ಕದ್ದಿಲ್ಲ. ನಾವೇ ಕೊಡಿಸಿದ ಹೊಸ ಪೆನ್ಸಿಲ್ಲದು ಎಂದು ಅವರು ಸುಳ್ಳು ಹೇಳಬಹುದು. ಇದರಲ್ಲಿ ನೀವು ಈ ಅಂಶಗಳನ್ನು ಗಮನಿಸಬೇಕು.. ನೀವು ಕೂಡ ಸುಳ್ಳು ಹೇಳಲು ಕಲಿಯಬಹುದು, ಅಪ್ಪ, ಅಮ್ಮ ಕೆಟ್ಟವರು ಎಂದುಕೊಳ್ಳಬಹುದು. ಅಥವಾ ಅವರು ನಿಮ್ಮನ್ನು ಜಗತ್ತಿನಿಂದ ಪ್ರೊಟೆಕ್ಟ್ ಮಾಡಿಕೊಳ್ಳುತ್ತಿರುವ ದಾರಿಯಿದು ಎಂದುಕೊಳ್ಳಬಹುದು. ಮನೆಯಲ್ಲಿ ನಿಮ್ಮನ್ನು ಬೈದು ಹೊರಗೆ ನಿಮ್ಮನ್ನು ಪ್ರೊಟೆಕ್ಟ್ ಮಾಡುವ ಪೋಷಕರನ್ನು ಅರ್ಥ ಮಾಡಿಕೊಳ್ಳಿ.
ಜಗತ್ತಿನಲ್ಲಿ ಅರ್ಥವಾಗೋದೇ ಇಲ್ಲ ಅನ್ನುವ ವಿಷಯಗಳೇ ಇಲ್ಲ, ಕೆಲವೊಂದನ್ನು ನಮಗೆ ನಾವೇ ಅರ್ಥ ಆಗೋದಿಲ್ಲ ಎಂದು ಗೇಟ್ ಹಾಕಿಕೊಳ್ತೇವೆ, ಕೆಲವೊಂದನ್ನು ಮತ್ತೊಬ್ಬರು ಹಾಕಿಬಿಡ್ತಾರೆ. ಆ ಗೇಟ್‌ನ ಬೀಗ ತೆಗೆದು ನಿಧಾನಕ್ಕೆ ಹೊರಗೆ ಕರೆತರಬೇಕಷ್ಟೆ. ಪೋಷಕರು ಏನೇ ಮಾಡಿದರೂ ನಿಮ್ಮ ಒಳ್ಳೆಯದಕ್ಕೇ ಆಗಿರುತ್ತದೆ. ಅವರು ಕೂಡ ಮೊದಲ ಬಾರಿಗೆ ಪೋಷಕರಾಗಿರುತ್ತಾರೆ, ಅವರನ್ನು ಅರ್ಥ ಮಾಡಿಕೊಳ್ಳೋಕೆ ಸಮಯ ನೀಡಿ. ಜೆನ್ಯೂನ್ ಆಗಿ ಟ್ರೈ ಮಾಡಿ..
Good writeup