ಕಾನೂನಿನ ಮೂಲಕ ಭ್ರೂಣ ಹತ್ಯೆ ತಡೆಗೆ ಅಗತ್ಯ ಕ್ರಮಕ್ಕೆ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷರ ಸೂಚನೆ

ಹೊಸದಿಗಂತ ವರದಿ ಮಂಡ್ಯ :

ಹೆಣ್ಣು ಭ್ರೂಣ ಹತ್ಯೆಯು ಸಮಾಜ ಘಾತುಕ ಕೆಲಸವಾಗಿದ್ದು, ಈ ರೀತಿಯ ಕೃತ್ಯಗಳಿಗೆ ಅವಕಾಶ ನೀಡಬಾರದು. ಕಾನೂನಿನ ಮೂಲಕ ಅಗತ್ಯ ಕ್ರಮ ತೆಗೆದುಕೊಂಡು ಇದನ್ನು ತಡೆಯುತ್ತೇವೆ ಎಂದು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ರಾಜ್ಯಾಧ್ಯಾಕ್ಷರಾದ ನಾಗಣ್ಣಗೌಡ ತಿಳಿಸಿದರು.

ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಹೆಣ್ಣು ಭ್ರೂಣ ಹತ್ಯೆ ಸಂಬಂಧಪಟ್ಟಂತೆ ತುರ್ತು ಸಭೆ ನಡೆಸಿ ಮಾತನಾಡಿದ ಅವರು, 21ನೇ ಶತಮಾನದಲ್ಲೂ ಕೂಡ ಇಂತಹ ಭ್ರೂಣ ಹತ್ಯೆ ನಡೆಯುತ್ತಿರುವುದು, ಲಿಂಗ ತಾರತಮ್ಯ ಸರಿಯಲ್ಲ. ಯಾವುದೇ ಕಾರಣಕ್ಕೂ ಇಂತಹ ಕೃತ್ಯಕ್ಕೆ ಅವಕಾಶ ನೀಡಬಾರದು. ಉಸ್ತುವಾರಿ ಸಚಿವರು ಭ್ರೂಣ ಹತ್ಯೆ ಸಂಬಂಧಪಟ್ಟಂತೆ ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಸಮಿತಿ ರಚಿಸಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ. ಈ ಸಮಿತಿಯನ್ನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ಯೋಚಿಸಲಾಗುವುದು ಎಂದರು.

ಭ್ರೂಣ ಹತ್ಯೆ ಚಟುವಟಿಕೆಗಳು ಎಲ್ಲೂ ನಡೆಯಬಾರದು. ಅನಧಿಕೃತ ನರ್ಸಿಂಗ್ ಹೋಮ್, ಡಯಗ್ನೋಸಾಟಿಕ್ ಸೆಂಟರ್‌ಗಳಲ್ಲಿ ಇಂತಹ ಕೃತ್ಯ ಕಂಡು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಇನ್ನೂ ಮುಂದೆ ಈ ರೀತಿಯ ಘಟನೆ ನಡೆಯದಂತೆ ಜಿಲ್ಲಾ ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳು ಜಾಗೃತರಾಗಿ ಕೆಲಸ ನಿರ್ವಹಿಸಿ. ಜೊತೆಗೆ ಸ್ಥಳೀಯ ಗುಪ್ತಚರ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!