ಹೊಸದಿಗಂತ ವರದಿ, ಕಲಬುರಗಿ:
ಸಾಂವಿಧಾನಿಕ ಹುದ್ದೆಯಲ್ಲಿರುವ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಜಿಲ್ಲೆಯ ಚಿತ್ತಾಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಿರುಕುಳ ನೀಡಿದ ಹಿನ್ನೆಲೆ,ನಾಳೆ ಕಲಬುರಗಿ ನಗರದಲ್ಲಿ ರಾಜ್ಯ ಬಿಜೆಪಿ ಘಟಕದಿಂದ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಂಎಲ್ಸಿ, ಮುಖ್ಯ ಸಚೇತಕ ಎನ್ ರವಿಕುಮಾರ್ ತಿಳಿಸಿದರು.
ಕಲಬುರಗಿ ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿಯಿಂದ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ನಡೆಯಲಿದ್ದು, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ,ವಿಪಕ್ಷ ನಾಯಕ ಆರ್.ಅಶೋಕ್, ಗೋವಿಂದ ಕಾರಜೋಳ, ಸಿಟಿ ರವಿ, ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.ಸರ್ವಾಧಿಕಾರಿ ಧೋರಣೆ ನಡೆಸುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ,ಗೆ ಸಂಪುಟದಿಂದ ವಜಾಗೊಳಿಸಬೇಕು, ಸಚಿವರ ಆಣತಿಯಂತೆ ಕೆಲಸ ಮಾಡುತ್ತಿರುವ ಪೋಲಿಸರ ಅಮಾನತು ಹಾಗೂ ನಮ್ಮ ಕಾರ್ಯಕರ್ತರ ಮೇಲೆ ಹಾಕಿದ ಕೆಸ್ ವಾಪಸ್ ಪಡೆಯಬೇಕೆಂಬ ಬೇಡಿಕೆಯನ್ನಿಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಎಂಎಲ್ಸಿ ರವಿಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ,ಶಾಸಕ ಬಸವರಾಜ ಮತ್ತಿಮಡು, ಅವಿನಾಶ್ ಜಾಧವ್, ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ನಗರಾಧ್ಯಕ್ಷ ಚಂದು ಪಾಟೀಲ್, ಎಂಎಲ್ಸಿ ಬಿ.ಜಿ.ಪಾಟೀಲ್, ಶಶೀಲ್ ನಮೋಶಿ, ಮಹೇಂದ್ರ ಕೌತಾಳ,ಮಾಜಿ ಶಾಸಕರಾದ ಸುಭಾಷ ಗುತ್ತೇದಾರ್, ರಾಜಕುಮಾರ್ ಪಾಟೀಲ್ ತೇಲ್ಕೂರ್, ದತ್ತಾತ್ರೇಯ ಪಾಟೀಲ್ ರೇವೂರ್, ಮುಖಂಡರಾದ ಅಮರನಾಥ ಪಾಟೀಲ್, ಶಿವರಾಜ್ ಪಾಟೀಲ್ ರದ್ದೇವಾಡಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.