ಗಗನಯಾನವೆಂದರೆ ಕೇವಲ ತಂತ್ರಜ್ಞಾನ ಮತ್ತು ವಿಜ್ಞಾನವಷ್ಟೇ ಅಲ್ಲ, ಅದು ಮಾನವ ದೇಹದ ನೈಸರ್ಗಿಕ ಪ್ರಕ್ರಿಯೆಗಳಿಗೂ ಸಂಬಂಧಿಸಿದ ವಿಷಯ. ಇತ್ತೀಚೆಗೆ ಹೆಚ್ಚುತ್ತಿರುವ ಮಹಿಳಾ ಗಗನಯಾತ್ರಿಗಳ ಭಾಗವಹಿಸುವಿಕೆಯಿಂದಾಗಿ, ಬಾಹ್ಯಾಕಾಶದಲ್ಲಿ ಮುಟ್ಟಿನ ಚಕ್ರ (Menstrual Cycle) ಹೇಗಿರುತ್ತದೆ ಎಂಬ ಪ್ರಶ್ನೆ ಸಹಜವಾಗಿ ಬಂದೆ ಬರುತ್ತೆ. ತಜ್ಞರ ಪ್ರಕಾರ, ಮಹಿಳೆಯರಿಗೆ ಬಾಹ್ಯಾಕಾಶದಲ್ಲೂ ಪೀರಿಯಡ್ಸ್ ನಿಯಮಿತವಾಗಿಯೇ ನಡೆಯುತ್ತದೆ.
ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಯು ಪೀರಿಯಡ್ಸ್ ನಲ್ಲಿ ಯಾವುದೇ ತೊಂದರೆ ಉಂಟುಮಾಡೋದಿಲ್ಲ ಎಂಬುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ದೇಹದ ಅಂತರಂಗ ಕ್ರಿಯೆಗಳು ಭೂಮಿಯ ಮೇಲಿನಂತೆಯೇ ಸರಾಗವಾಗಿ ಸಾಗುತ್ತವೆ. ಆದರೂ, ಪ್ರಾಯೋಗಿಕ ಮತ್ತು ತಾಂತ್ರಿಕ ಕಾರಣಗಳಿಂದಾಗಿ, ಹಲವಾರು ಮಹಿಳಾ ಗಗನಯಾತ್ರಿಗಳು ತಮ್ಮ ಮುಟ್ಟನ್ನು ತಡೆದಿಟ್ಟುಕೊಳ್ಳುವ ಆಯ್ಕೆಯನ್ನೇ ಬಳಸುತ್ತಾರೆ.
ಅದಕ್ಕೆ ಕಾರಣವೊಂದು–ಬಾಹ್ಯಾಕಾಶ ನೌಕೆಯೊಳಗಿನ ಸೀಮಿತ ನೀರಿನ ಬಳಕೆ ಮತ್ತು ನೈರ್ಮಲ್ಯಕ್ಕೆ ಬೇಕಾದ ಸೂಕ್ತ ವ್ಯವಸ್ಥೆಗಳ ಕೊರತೆ. ಮುಟ್ಟಿನ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯೂ ವಿಶಿಷ್ಟ ಎಚ್ಚರಿಕೆಯನ್ನು ಬೇಡುತ್ತದೆ, ಏಕೆಂದರೆ ಬಾಹ್ಯಾಕಾಶದಲ್ಲಿ ತ್ಯಾಜ್ಯ ನಿರ್ವಹಣೆಯು ತುಂಬಾ ನಿಯಂತ್ರಿತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ಕೆಲವವರು ಮುಟ್ಟಿನ ಚಕ್ರವನ್ನು ತಡೆಯಲು ಹಾರ್ಮೋನಲ್ ಮಾತ್ರೆಗಳನ್ನು ಬಳಸುತ್ತಾರೆ.
ಪೀರಿಯಡ್ಸ್ ಬಂದ್ರೂ ಕೂಡ, ಪ್ಯಾಡ್ಗಳು, ಟ್ಯಾಂಪೂನ್ಗಳು ಅಥವಾ ಮೆನ್ಸ್ಟ್ರುವಲ್ ಕಪ್ಗಳನ್ನು ಬಳಸಬಹುದು. ತಜ್ಞರ ಪ್ರಕಾರ, ಇವು ಕೂಡ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲೂ ಚೆನ್ನಾಗಿ ಕಾರ್ಯನಿರ್ವಹಿಸುತ್ತವಂತೆ.
ಒಟ್ಟಿನಲ್ಲಿ, ಬಾಹ್ಯಾಕಾಶವೂ ಪೀರಿಯಡ್ಸ್ ಗೆ ಅಡ್ಡಿಯಾಗುವಂಥದ್ದು ಅಲ್ಲ. ಆದರೆ ಅದನ್ನು ಹೇಗೆ ನಿರ್ವಹಿಸಬೇಕು ಅನ್ನೋದು ಮಹಿಳಾ ಗಗನಯಾತ್ರಿಗಳ ಮುಂದೆ ದೊಡ್ಡ ಸವಾಲಾಗಿದೆ. ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಈ ಸಮಸ್ಯೆಗಳಿಗೂ ಪರಿಣಾಮಕಾರಿ ಪರಿಹಾರ ಒದಗಿಸುತ್ತಿರುವುದು ಹೆಮ್ಮೆಯ ವಿಚಾರವೇ ಸರಿ.