ಹೊಸದಿಗಂತ ವರದಿ ಬೆಂಗಳೂರು:
ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಸಂಬಂಧಿಸಿದ ನ್ಯಾ.ನಾಗಮೋಹನ ದಾಸ್ ಆಯೋಗ ಎಬಿಸಿಡಿ ಗ್ರುಪ್‌ಗಳಲ್ಲಿರುವ ಜಾತಿಗಳನ್ನೇ ಬದಲಾವಣೆ ಮಾಡಿದ್ದು, ಛಲವಾದಿ ಸಮುದಾಯಕ್ಕೆ ಅನ್ಯಾಯವಾಗಲಿದೆ. ಅದನ್ನು ನಾವು ಒಪ್ಪುವುದಿಲ್ಲ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿಗೆ ಸಂಬಂಧಿಸಿ ಎ- ಶೇ.೬, ಬಿ- ಶೇ.೫.೫, ಸಿ- ಶೇ.೪ ಮತ್ತು ಡಿ ಗ್ರುಪ್‌ಗೆ ಶೇ.೧ ರಷ್ಟು ಮೀಸಲಾತಿ ನಿಗದಿ ಮಾಡಿತ್ತು. ಅದನ್ನು ಕಾಂಗ್ರೆಸ್ ಸರ್ಕಾರವೂ ಒಪ್ಪಿತ್ತು. ಈ ಕುರಿತು ಸುಪ್ರೀಂ ಕೋರ್ಟ್ ಆದೇಶ ಬಂದು ಒಂದು ವರ್ಷ ಕಳೆದಿದೆ. ಕಳೆದೊಂದು ವರ್ಷದಿಂದ ಯಾವುದೇ ನೇಮಕಾತಿ ನಡೆದಿಲ್ಲ. ವಿದ್ಯಾವಂತರು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಮಾತ್ರ ಮೀಸಲಾತಿ ನೆಪದಲ್ಲಿ ಕಾಲಹರಣ ಮಾಡುತ್ತಿದೆ.
ಈ ನಡುವೆ ನ್ಯಾ. ನಾಗಮೋಹನ ದಾಸ್ ವರದಿ ಅಧಿಕೃತವಾಗಿ ಬಿಡುಗಡೆಯಾಗದಿದ್ದರೂ, ಈಗಾಗಲೇ ಸಾರ್ವಜನಿಕವಾಗಿ ಸೋರಿಕೆಯಾಗಿದೆ. ವರದಿಯಲ್ಲಿರುವ ಅಂಶಗಳು ಸಂಪೂರ್ಣ ಅವೈಜ್ಞಾನಿಕವಾಗಿದೆ. ಛಲವಾದಿ ಸಮುದಾಯಕ್ಕೆ ಸೇರಬೇಕಾದ ಜಾತಿಗಳನ್ನು ಮಾದಿಗ ಸಮುದಾಯಕ್ಕೆ ಸೇರಿಸಿದ್ದಾರೆ. ಮಾದಿಗ ಸಮುದಾಯದ ಸಂಖ್ಯಾಬಲ ಹೆಚ್ಚಿದೆ. ಕುಲಶಾಸ್ತ್ರ ಅಧ್ಯಯನ ಮಾಡದೇೆ ರಿಪೋರ್ಟ್ ತಯಾರಿಸವುದು ಸರಿಯಲ್ಲ. ಇದರಿಂದ ಒಂದು ಸಮುದಾಯಕ್ಕೆ ಅನ್ಯಾಯ, ವಂಚನೆಯಾಗಲಿದೆ. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.
ಪರಿಶಿಷ್ಟ ಜಾತಿಗಳು ಸೌಮ್ಯವಾಗಿ ಇರುತ್ತಿದ್ದವು. ಕಾಂಗ್ರೆಸ್ ಸರ್ಕಾರ ಬೀದಿಗೆ ಬಂದು ಹೋರಾಟ ಮಾಡುವಂತೆ ಮಾಡಿದೆ. ಒಂದು ಬಾರಿ ಸಮೀಕ್ಷೆಯಾಗಿತ್ತು. ಎರಡನೇ ಬಾರಿಯ ಸಮೀಕ್ಷೆಯನ್ನೂ ಕಾಂಗ್ರೆಸ್ ಸರ್ಕಾರ ಒಪ್ಪಿಲ್ಲ. ಸಮೀಕ್ಷೆ ಹೆಸರಲ್ಲಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡೋದು ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.