ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ಕಾರಣದಿಂದ ಮಾರ್ಚ್ 2020 ರಲ್ಲಿ ಅಂತ್ಯವಾಗಿದ್ದ ಅಂತಾರಾಷ್ಟ್ರೀಯ ವಿಮಾನ ಮತ್ತೆ ಆರಂಭವಾಗಿದ್ದು, ಮಾರ್ಚ್ 27ರಿಂದ ಪುನರಾರಂಭಗೊಳ್ಳಲಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ನಾಗರಿಕ ವಿಮಾನಯಾನ ಸಚಿವಾಲಯ, ಕೋವಿಡ್ ಸೋಂಕಿನಿಂದಾಗಿ ಕಳೆದ ಎರಡು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳು ಮಾರ್ಚ್ 27ರಿಂದ ಪುನರಾರಂಭಗೊಳ್ಳಲಿವೆ.
ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದು, ಇದರ ಜೊತೆಗೆ ಲಸಿಕೆ ನೀಡುವಿಕೆ ಪ್ರಮಾಣ ಹೆಚ್ಚಳವಾಗಿದ್ದು, ಈ ಕಾರಣದಿಂದ ಎರಡು ವರ್ಷಗಳ ವಿರಾಮದ ನಂತರ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳನ್ನು ಪುನರಾರಂಭಿಸುವ ನಿರ್ಧಾರವನ್ನು ನಾಗರಿಕ ವಿಮಾನಯಾನ ಸಚಿವಾಲಯ ತೆಗೆದುಕೊಂಡಿದೆ.
ಈ ಹಿಂದೆ ಜುಲೈ 2020 ರಿಂದ ಭಾರತ ಮತ್ತು ಸುಮಾರು 40 ದೇಶಗಳ ನಡುವೆ ಬಯೋ ಬಬ್ಬಲ್ ವ್ಯವಸ್ಥೆಗಳ ಅಡಿಯಲ್ಲಿ ವಿಶೇಷ ಪ್ರಯಾಣಿಕರ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.ಆದರೆ ಇದೀಗ ಸಂಪೂರ್ಣ ನಿರ್ಬಂಧ ವಾಪಸ್ ಪಡೆದಿದ್ದು, ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದ್ಯಾ ತಿಳಿಸಿದ್ದಾರೆ.
ಈ ವೇಳೆ ಮುಖ್ಯವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವುದಾಗಿ ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.