ಹೊಸದಿಗಂತ ವರದಿ,ಮೈಸೂರು:
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವದ ಸಂದರ್ಭ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರು-ಬೆಂಗಳೂರು ನಡುವಿನ ರಾಜ್ಯ ರಾಣಿ ಎಕ್ಸ್’ಪ್ರೆಸ್ ಅನ್ನು ಮೈಸೂರಿನಲ್ಲಿ ಶುಕ್ರವಾರ ಎಲ್ಲಾ ಮಹಿಳಾ ಸಿಬ್ಬಂದಿಗಳೇ ತಮ್ಮ ಕೌಶಲ್ಯದಿಂದ ನಿರ್ವಹಿಸಿದರು.
ಮಹಿಳಾ ಲೋಕೋ ಪೈಲಟ್ ಆದ ಶ್ರೀಶಾ ಜಿ., ಸಹಾಯಕ ಲೋಕೋ ಪೈಲಟ್ ಆದ ಸೋನಾ ಜಿ., ರೈಲು ವ್ಯವಸ್ಥಾಪಕಿ ಪ್ರಿಯದರ್ಶಿನಿ, ಮಹಿಳಾ ಟಿಕೆಟ್ ತಪಾಸಕರು ಮತ್ತು ರೈಲ್ವೆ ಸಂರಕ್ಷಣಾ ದಳವನ್ನು ಒಳಗೊಂಡ ಎಲ್ಲಾ ಮಹಿಳಾ ಸಿಬ್ಬಂದಿಗಳು ರಾಜ್ಯ ರಾಣಿ ಎಕ್ಸ್’ಪ್ರೆಸ್ ಅನ್ನು ದೋಷರಹಿತವಾಗಿ ನಿರ್ವಹಿಸಿ ತಮ್ಮ ಸಾಮರ್ಥ್ಯ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದರು.
ಮೈಸೂರಿನ ಕೇಂದ್ರ ರೈಲು ನಿಲ್ದಾಣದಲ್ಲಿ ನಡೆದ ಈ ಕಾರ್ಯಕ್ರಮ ಭಾರತೀಯ ರೈಲ್ವೆಯಲ್ಲಿ ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆಗೆ ಸಂದ ಗೌರವವಾಗಿದೆ.
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಮಾರ್ಗದರ್ಶನದಲ್ಲಿ ನಡೆದ ಇಂದಿನ ಕಾರ್ಯಕ್ರಮದ ಉದ್ದಕ್ಕೂ ಈ ವರ್ಷದ ವಿಷಯವಾದ ‘ಮಹಿಳೆಯರಲ್ಲಿ ಹೂಡಿಕೆ ಮಾಡಿ: ಪ್ರಗತಿಯನ್ನು ವೇಗಗೊಳಿಸಿ’ ಘೋಷವಾಕ್ಯವು ಪ್ರತಿಧ್ವನಿಸಿತು. ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಮಹಿಳಾ ಉದ್ಯೋಗಿಗಳಲ್ಲಿ ಪ್ರಗತಿಯನ್ನು ಗಮನಾರ್ಹವಾಗಿ ಹೆಚ್ಚಿಸಲು ಮಹಿಳೆಯರ ಒಳಗೊಳ್ಳುವಿಕೆಯನ್ನು ಉತ್ತೇಜಿಸುವತ್ತ ಒತ್ತು ನೀಡಲಾಯಿತು. “ಇನ್ಸ್ಪೈರ್ ಇನ್ಕ್ಲೂಷನ್ ಒಳಗೊಳ್ಳುವಿಕೆಯನ್ನು ಪ್ರೇರೇಪಿಸಿ” ಎಂಬ ವ್ಯಾಪಕ ಪ್ರಚಾರದ ವಿಷಯವು ಕಾರ್ಯಕ್ರಮದ ಸಾರವನ್ನು ಒಳಗೊಂಡಿದ್ದೂ, ಭಾರತೀಯ ರೈಲ್ವೆಯ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಪ್ರಮುಖ ಪಾತ್ರವನ್ನು ಒತ್ತಿಹೇಳುತ್ತದೆ.
ಶಿಲ್ಪಿ ಅಗರ್ವಾಲ್ , ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯ ಸದಸ್ಯರೊಂದಿಗೆ, ತುಂಬಿದ್ದ ಮೈಸೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಗುಲಾಬಿ ಮೊಗ್ಗುಗಳು ಮತ್ತು ಸಿಹಿಯನ್ನು ವಿತರಿಸಿದರು.
ಈ ಸಂದರ್ಭ ಮಾತನಾಡಿದ ಶಿಲ್ಪಿ ಅಗರ್ವಾಲ್, ಭಾರತೀಯ ರೈಲ್ವೆಯಲ್ಲಿ ಮಹಿಳೆಯರನ್ನು ಗುರುತಿಸುವ ಮತ್ತು ಬೆಂಬಲಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಧನಾತ್ಮಕ ಬದಲಾವಣೆಯನ್ನು ಹೆಚ್ಚಿಸಲು ಮತ್ತು ಹೆಚ್ಚು ಮಹಿಳೆಯರನ್ನು ಒಳಗೊಳ್ಳುವ ಹಾಗು ಕೆಲಸದಲ್ಲಿ ಸಮಾನವಾದ ಸ್ಥಾನವನ್ನು ಉತ್ತೇಜಿಸುವ ಕಾರಣಕ್ಕಾಗಿ ರೈಲ್ವೆಯಲ್ಲಿ ಮಹಿಳಾ ಸಬಲೀಕರಣದ ಅಗತ್ಯದ ಬಗ್ಗೆ ತಿಳಿಸಿದರು.
ಈ ವೇಳೆ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರುಗಳಾದ ಇ.ವಿಜಯ, ವಿನಾಯಕ್ ನಾಯಕ್, ಹಿರಿಯ ವಿಭಾಗೀಯ ಕಾರ್ಯ ನಿರ್ವಾಹಕಿ ಅಂಕಿತಾ ವರ್ಮಾ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಜೆ ಲೋಹಿತೇಶ್ವರ, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ವಿಷ್ಣು ಗೌಡ, ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ಸದಸ್ಯರು ಹಾಗೂ ಇತರ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣ ಮಹಿಳಾ ಸಿಬ್ಬಂದಿಗಳಿoದ ಚಲಾಯಿಸಲಾಗುವ ರಾಜ್ಯ ರಾಣಿ ಎಕ್ಸ್ಪ್ರೆಸ್ ನ ಹಸಿರು ದ್ವಜ ನಿಶಾನೆ ತೋರಿಸುವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.