ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂವಿಧಾನದಲ್ಲಿ ಉಲ್ಲೇಖಿತವಾಗಿರುವ ಎಲ್ಲಾ ಭಾಷೆಗಳಲ್ಲಿಯೂ ಸದನದಲ್ಲಿ ಈಗ ವ್ಯಾಖ್ಯಾನ ಸೌಲಭ್ಯ ಅಳವಡಿಸಿಕೊಳ್ಳಲಾಗಿದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ಇಲ್ಲಿಯವರೆಗೆ ಇಂಗ್ಲಿಷ್ ಮತ್ತು ಹಿಂದಿ ಹೊರತುಪಡಿಸಿ 18 ಭಾಷೆಗಳಲ್ಲಿ ವ್ಯಾಖ್ಯಾನ ಸೌಲಭ್ಯವಿತ್ತು. ಆದರೆ ಇದೀಗ ಕೊಂಕಣಿ, ಕಶ್ಮೀರಿ ಮತ್ತು ಸಂತಾಲಿ ಭಾಷೆಗಳನ್ನೂ ಸೇರಿಸಲಾಗಿದೆ ಎಂದರು ಹೇಳಿದರು. ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಹಾರದ ಮತ ಪಟ್ಟಿ ಪರಿಷ್ಕರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿರೋಧ ಪಕ್ಷಗಳು ಇಂದು ಕೂಡ ಲೋಕಸಭೆಯಲ್ಲಿ ಗದ್ದಲ ಮುಂದುವರೆಸಿದರು. ಗದ್ದಲದ ನಡುವೆಯೇ ಪ್ರಶ್ನೋತ್ತರ ಅವಧಿಯು ಮುಂದುವರೆಯಿತು. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ವಿಕಸಿತ ಕೃಷಿ ಸಂಕಲ್ಪ ಯೋಜನೆ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಅಭಿಯಾನ ಸರ್ಕಾರಿ ಯೋಜನೆಯಾಗಿ ಉಳಿದಿಲ್ಲ, ಬದಲಿಗೆ ಇದು ಒಂದು ಸಾಮೂಹಿಕ ಆಂದೋಲನವಾಗಿ ರೂಪುಗೊಂಡಿದೆ. ಈ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ ಮೂರು ಸಾವಿರಕ್ಕೂ ಅಧಿಕ ತಜ್ಞರ ತಂಡಗಳು 8 ಸಾವಿರಕ್ಕೂ ಅಧಿಕ ಭೇಟಿ ನೀಡಿವೆ.
ಇದಾಗಲೇ 10 ದಶಲಕ್ಷಕ್ಕೂ ಹೆಚ್ಚು ರೈತರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲಾಗಿದೆ ಎಂದರು. ರೈತರೊಂದಿಗೆ ಚರ್ಚೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ. ರೈತರ ಪ್ರಶ್ನೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ತಜ್ಞರು ಪರಿಹರಿಸುತ್ತಿದ್ದಾರೆ. ಹವಾಮಾನ ಸ್ನೇಹಿ ಬೆಳೆಗಳು, ರಸಗೊಬ್ಬರಗಳ ಬಳಕೆ, ಮಣ್ಣಿನ ಪೋಷಕಾಂಶಗಳ ಜ್ಞಾನ, ಬೆಳೆಗಳಿಗೆ ಬರುವ ರೋಗ ಇತ್ಯಾದಿಗಳ ಬಗ್ಗೆ ಮಾಹಿತಿ ಮತ್ತು ಪರಿಹಾರ ನೀಡಲಾಗಿದೆ.
ಪ್ರಸ್ತುತ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಸಾವಯವ ಕೃಷಿ, ಕೃಷಿಯಲ್ಲಿ ಡ್ರೋನ್ಗಳ ಬಳಕೆ, ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಯಂತಹ ಪ್ರಮುಖ ವಿಷಯಗಳ ಬಗ್ಗೆ ರೈತರಿಗೆ ಶಿಕ್ಷಣ ನೀಡುವಲ್ಲಿ ಈ ಅಭಿಯಾನವು ವಿಶೇಷವಾಗಿ ಉಪಯುಕ್ತವಾಗಿದೆ ಎಂದು ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಪ್ರತಿಪಕ್ಷಗಳು ಗದ್ದಲವನ್ನು ಮುಂದುವರೆಸಿದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.