ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್ಲೈನ್ ಪಬ್ಜಿ ಗೇಮಿಂಗ್ ಮೂಲಕ ಭಾರತದ ಯುವಕನ ಪರಿಚಯ ಮಾಡಿಕೊಂಡ ಪಾಕಿಸ್ತಾನಿ ಮಹಿಳೆ ಆ ಬಳಿಕ ಇಲ್ಲಿಯೇ ಬಂದು ನೆಲೆಸಿರುವ ಘಟನೆ ನಡೆದಿದೆ.
ಆನ್ಲೈನ್ ಗೇಮಿಂಗ್ ಪಬ್-ಜಿ ಮೂಲಕ ಪರಿಚಯವಾದ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ರಬೂಪುರದ ಯುವಕನಿಗಾಗಿ ಮಹಿಳೆ ಒಬ್ಬಳು ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಬಂದಿದ್ದಾಳೆ.
ಇದೀಗ ರಬೂಪುರ ಪೊಲೀಸರು ಹಿಳೆ ಹಾಗೂ ಆಕೆಗೆ ಆಶ್ರಯ ನೀಡಿದ ವ್ಯಕ್ತಿಯನ್ನು ಬಂಧಿಸಿದ್ದು, ನಾಲ್ವರು ಮಕ್ಕಳನ್ನು CWC ಸದಸ್ಯರ ಸುಪರ್ದಿಗೆ ಒಪ್ಪಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಸಾದ್ ಮಿಯಾ ಖಾನ್, ಸೀಮಾ ಗುಲಾಂ ಹೈದರ್(20) ಎಂಬ ಮಹಿಳೆಯೂ ಪಬ್-ಜಿ ಆಡುವ ವೇಳೆ ನೊಯ್ಡಾ ಮೂಲದ ಯುವಕ ಸಚಿನ್ ಎಂಬುವವರ ಜೊತೆ ಪರಿಚಯವಾಗಿದೆ. ದಿನ ಕಳೆದಂತೆ ಇಬ್ಬರು ನಡುವೆ ಆತ್ಮೀಯತೆ ಬೆಳೆದಿದ್ದು, ಪರಿಚಯ ಪ್ರೀತಿಯಾಗಿ ಮಾರ್ಪಟ್ಟಿದೆ.
ಕೆಲ ದಿನಗಳ ಬಳಿಕ ಸೀಮಾ ತನ್ನ ನಾಲ್ವರು ಮಕ್ಕಳೊಂದಿಗೆ ಪಾಕಿಸ್ತಾನ ತೊರೆದಿದ್ದು, ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾಳೆ. ಬಳಿಕ ನೊಯ್ಡಾದ ರಬುಪುರ ಪ್ರದೇಶದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಸಚಿನ್ ಹಾಗೂ ಸೀಮಾ ಲಿವ್-ಇನ್-ರಿಲೇಷನ್ಶಿಪ್ನಲ್ಲಿದ್ದರು.
ದಿನ ಕಳೆದಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಪಾಕಿಸ್ತಾನ ಮೂಲದ ಮಹಿಳೆ ನೊಯ್ಡಾದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಗ್ಗೆ ವಿಚಾರ ತಿಳಿದಿದೆ. ಈ ಬಗ್ಗೆ ಅಪಾರ್ಟ್ಮೆಂಟ್ ಮಾಲೀಕರನ್ನು ಪ್ರಶ್ನಿಸಿದಾಗ ಅಷ್ಟರಲ್ಲಾಗಲೇ ಸಚಿನ್ ಹಾಗೂ ಸೀಮಾ ಬಾಡಿಗೆ ಮನೆಯನ್ನು ಖಾಲಿ ಮಾಡಿ ಪರಾರಿಯಾಗಿದ್ದರು. ಮನೆ ಮಾಲೀಕರು ಹೇಳುವ ಪ್ರಕಾರ ಆಕೆ ಪಾಕಿಸ್ತಾನದವರಂತೆ ಕಾಣಲಿಲ್ಲ ಎಂದು ಹೇಳಿದ್ದಾರೆ.
ಆರೋಪಿಗಳಿಬ್ಬರು ನೊಯ್ಡಾದಲ್ಲೇ ಅಡಗಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಬೆನ್ನಲ್ಲೇ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಸೀಮಾಗೆ ಈಗಾಗಲೇ ಮದುವೆಯಾಗಿ ನಾಲ್ವರು ಮಕ್ಕಳಿದ್ದು, ಸಚಿನ್ ಎಂಬಾತನನ್ನು ಲವ್ ಮಾಡಲು ಶುರು ಮಾಡಿದ ನಂತರ ಕುಟುಂಬಸ್ಥರನ್ನು ಬಿಟ್ಟು ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಳು. ಸದ್ಯ ವಿಚಾರಣೆ ನಡೆಯುತ್ತಿದ್ದು, ಮಹಿಳೆ ಪಾಕಿಸ್ತಾನದಲ್ಲಿ ಯಾವ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.