ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಶಾನ್ಯ ರಾಜ್ಯಗಳಲ್ಲಿ ತಮ್ಮ ಹೂಡಿಕೆಯನ್ನು 75 ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿಸುವ ಗುರಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಹೊಂದಿದ್ದಾರೆ.
ಸದ್ಯಕ್ಕೆ ಕಂಪನಿಯು ಈ ರಾಜ್ಯಗಳಲ್ಲಿ ಸುಮಾರು 30 ಸಾವಿರ ಕೋಟಿ ರೂಪಾಯಿ ಹೂಡಿಕೆಯನ್ನು ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ, ಈ ರಾಜ್ಯಗಳಲ್ಲಿ ಸುಮಾರು 45 ಸಾವಿರ ಕೋಟಿ ರೂಪಾಯಿಗಳ ಹೊಸ ಹೂಡಿಕೆಯನ್ನು ರಿಲಯನ್ಸ್ ಮಾಡಲಿದೆ.
ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ‘ರೈಸಿಂಗ್ ನಾರ್ಥ್ ಈಸ್ಟ್ ಇನ್ವೆಸ್ಟರ್ಸ್ ಸಮ್ಮಿಟ್’ನಲ್ಲಿ ಮಾತನಾಡಿದ ಮುಕೇಶ್ ಅಂಬಾನಿ , ಸಶಸ್ತ್ರ ಪಡೆಗಳ ಅಪ್ರತಿಮ ಶೌರ್ಯದಿಂದಾಗಿ ಯಶಸ್ವಿಯಾದ ಆಪರೇಷನ್ ಸಿಂದೂರ್‌ಗೆ ಪ್ರಧಾನಿ ಮೋದಿ ಮತ್ತು ದೇಶವನ್ನು ಅಭಿನಂದಿಸಿದರು.
ಈ ಪ್ರಸ್ತಾವಿತ ಹೂಡಿಕೆಯು 25 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶ ಸೃಷ್ಟಿಸುತ್ತದೆ . ಈಶಾನ್ಯ ರಾಜ್ಯಗಳಲ್ಲಿ 350 ಜೈವಿಕ ಅನಿಲ ಸ್ಥಾವರಗಳನ್ನು ಸ್ಥಾಪಿಸುವ ಬದ್ಧತೆಯನ್ನು ಮುಕೇಶ್ ವ್ಯಕ್ತಪಡಿಸಿದರು.
ಜಿಯೋ ಬಗ್ಗೆ ಉಲ್ಲೇಖಿಸಿದ ಮುಕೇಶ್ ಅಂಬಾನಿ, ರಿಲಯನ್ಸ್ ಜಿಯೋದ 5ಜಿ ನೆಟ್‌ವರ್ಕ್ ಈಶಾನ್ಯ ರಾಜ್ಯಗಳ ಜನಸಂಖ್ಯೆಯ ಸುಮಾರು ಶೇಕಡಾ 90ರಷ್ಟನ್ನು ತಲುಪಿದೆ ಎಂದು ಹೇಳಿದರು. 50 ಲಕ್ಷ ಜನರು ಜಿಯೋ 5ಜಿ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿದ್ದು, ಈ ವರ್ಷ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ. ರೈತರ ಆದಾಯವನ್ನು ಹೆಚ್ಚಿಸಲು ರಿಲಯನ್ಸ್ ರೀಟೇಲ್ ನೇರ ಖರೀದಿಯನ್ನು ಪ್ರೋತ್ಸಾಹಿಸುತ್ತದೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ರಿಲಯನ್ಸ್ ಫೌಂಡೇಷನ್‌ನ ಕೆಲಸದ ಬಗ್ಗೆ ಮಾಹಿತಿ ನೀಡಿದ ಅವರು, ರಿಲಯನ್ಸ್ ಫೌಂಡೇಷನ್ ಮಣಿಪುರದಲ್ಲಿ 150 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆಯನ್ನು ಸ್ಥಾಪಿಸಿದೆ. ಇದರೊಂದಿಗೆ, ಜೀನೋಮಿಕ್ ಡೇಟಾವನ್ನು ಬಳಸಿಕೊಂಡು ಸ್ತನ ಕ್ಯಾನ್ಸರ್ ಆರೈಕೆಯನ್ನು ಮುನ್ನಡೆಸಲು ಫೌಂಡೇಷನ್ ಮಿಜೋರಾಂ ವಿಶ್ವವಿದ್ಯಾಲಯದೊಂದಿಗೆ ಸಹಕರಿಸುತ್ತಿದೆ ಎಂದರು. ಗುವಾಹತಿಯಲ್ಲಿ ಸುಧಾರಿತ ಆನ್ವಿಕ ರೋಗನಿರ್ಣಯ ಮತ್ತು ಸಂಶೋಧನಾ ಪ್ರಯೋಗಾಲಯವನ್ನು ಸ್ಥಾಪಿಸಿದೆ. ಇದು ಭಾರತದಲ್ಲಿ ಅತಿ ದೊಡ್ಡ ಜೀನೋಮ್ ಅನುಕ್ರಮ ಸಾಮರ್ಥ್ಯಗಳೊಂದಿಗೆ ಸಜ್ಜುಗೊಳ್ಳಲಿದೆ. ಈಶಾನ್ಯ ರಾಜ್ಯಗಳಲ್ಲಿ, ರಿಲಯನ್ಸ್ ಫೌಂಡೇಷನ್ ಎಲ್ಲ ಎಂಟು ರಾಜ್ಯಗಳೊಂದಿಗೆ ಒಟ್ಟಾಗಿ ಒಲಿಂಪಿಕ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸುತ್ತದೆ, ಇಲ್ಲಿಂದ ತರಬೇತಿ ಪಡೆದು ಬರುವ ಯುವಕರು ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರಾಗಲು ಸಾಧ್ಯವಾಗುತ್ತದೆ ಎಂದರು.