ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 19ರ ಮೆಗಾ ಹರಾಜಿನಲ್ಲಿ ಭಾರತದ ಯುವ ಸ್ಫೋಟಕ ಬ್ಯಾಟರ್ ಪೃಥ್ವಿ ಶಾ ಅವರಿಗೆ ಕೊನೆಯ ಕ್ಷಣದಲ್ಲಿ ಅದೃಷ್ಟ ಖುಲಾಯಿಸಿದೆ. ಹರಾಜು ಪಟ್ಟಿಯ ಮೊದಲ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದ ಪೃಥ್ವಿ, ಆರಂಭಿಕ ಸುತ್ತುಗಳಲ್ಲಿ ಯಾವುದೇ ಫ್ರಾಂಚೈಸಿಗಳ ಆಸಕ್ತಿ ಗಳಿಸದೆ ಮಾರಾಟವಾಗದೇ ಉಳಿದಿದ್ದರು.
75 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಬಲಗೈ ದಾಂಡಿಗ ಪೃಥ್ವಿ ಶಾ ಅವರನ್ನು ಮೊದಲ ಸುತ್ತಿನಲ್ಲಿ ಯಾವ ತಂಡವೂ ಖರೀದಿಸಲಿಲ್ಲ. ನಂತರ, ವಿಶೇಷವಾಗಿ ವೇಗ ಹೆಚ್ಚಿಸಲು ನಡೆಸುವ ‘ಆಕ್ಸಲೇಟರ್ ರೌಂಡ್’ನಲ್ಲಿ ಮತ್ತೊಮ್ಮೆ ಅವರ ಹೆಸರು ಬಂದರೂ, ಆಗಲೂ ಪೃಥ್ವಿಯನ್ನು ಖರೀದಿಸಲು ಯಾವ ಫ್ರಾಂಚೈಸಿಯೂ ಬಿಡ್ ಮಾಡಲಿಲ್ಲ. ಹೀಗಾಗಿ, ಈ ಬಾರಿ ಪೃಥ್ವಿ ಶಾ ಅನ್ಸೋಲ್ಡ್ ಆಗಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು.
ಆದರೆ, ಅಂತಿಮ ಸುತ್ತಿನಲ್ಲಿ ನಡೆದ ಬೆಳವಣಿಗೆಯಲ್ಲಿ ಪೃಥ್ವಿ ಶಾ ಅವರಿಗೆ ಅದೃಷ್ಟದ ಬಾಗಿಲು ತೆರೆದಿದೆ. ಮೂರನೇ ಬಾರಿಗೆ ಅಂತಿಮ ಸುತ್ತಿನಲ್ಲಿ ಕಾಣಿಸಿಕೊಂಡಾಗ, ಅವರ ಹಿಂದಿನ ಫ್ರಾಂಚೈಸಿ ದೆಹಲಿ ಕ್ಯಾಪಿಟಲ್ಸ್ ಬಿಡ್ ಮಾಡುವ ಮೂಲಕ ಅವರಿಗೆ ಹೊಸ ಅವಕಾಶ ನೀಡಿದೆ.
ದೆಹಲಿ ಕ್ಯಾಪಿಟಲ್ಸ್ ತಂಡವು ಪೃಥ್ವಿ ಶಾ ಅವರನ್ನು ಅವರ ಮೂಲ ಬೆಲೆ 75 ಲಕ್ಷಕ್ಕೆ ಖರೀದಿಸಿದೆ. ಈ ಮೂಲಕ, 2024ರ ಸೀಸನ್‌ನಲ್ಲಿ 7.5 ಕೋಟಿ ಪಡೆದಿದ್ದ ಪೃಥ್ವಿ ಶಾ, ಈ ಬಾರಿ ಹತ್ತನೇ ಒಂದು ಭಾಗದ ಬೆಲೆಗೆ ಹಳೆಯ ತಂಡವನ್ನೇ ಸೇರಿಕೊಂಡಿದ್ದಾರೆ. ಮುಂಬರುವ ಸೀಸನ್‌ನಲ್ಲಿ ಯುವ ಬ್ಯಾಟರ್ ಮತ್ತೊಮ್ಮೆ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ.

