ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ನ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, ಇಂದಿನಿಂದ ಎರಡು ದಿನ ಹರಾಜು ಪ್ರಕ್ರಿಯೆ ನಡೆಯಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ಫೆ.12 ಮತ್ತು ಫೆ.13ರಂದು ಮೆಗಾ ಹರಾಜು ನಡೆಯಲಿದೆ. ಈಗಾಗಲೇ ಬೆಂಗಳೂರಿಗೆ ಎಲ್ಲಾ 10 ಫ್ರಾಂಚೈಸಿಗಳು ಬಂದಿಳಿದಿದ್ದು, ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಹರಾಜು ನಡೆಯಲಿದೆ.
ಈ ರಾಜಿನಲ್ಲಿ ಒಟ್ಟು 590 ಆಟಗಾರರ ಭವಿಷ್ಯ ಹಾಗೂ ಅದೃಷ್ಟ ಪರೀಕ್ಷೆ ನಡೆಯಲಿದ್ದು. ಇವರಲ್ಲಿ 370 ಭಾರತೀಯ ಹಾಗೂ 220 ವಿದೇಶಿ ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
590 ಆಟಗಾರರ ಪೈಕಿ 228 ಮಂದಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವವರು ಹಾಗೂ 355 ದೇಶಿಯ ಕ್ರಿಕೆಟ್ ಆಡಿರುವವರಿದ್ದಾರೆ.
ಈ ಬಾರಿ ಹರಾಜಿನಲ್ಲಿ ಡೇವಿಡ್ ವಾರ್ನರ್, ಶ್ರೇಯಸ್ ಅಯ್ಯರ್, ಶಿಖರ್ ಧವನ್, ಕಗಿಸೋ ರಬಾಡಾ, ಕ್ವಿಂಟನ್ ಡಿಕಾಕ್, ಮೊಹಮ್ಮದ್ ಶಮಿ ಮುಂತಾದವರು ಈ ಹರಾಜಿನಲ್ಲಿ ಭಾಗಿಯಾಗಲಿದ್ದಾರೆ. ವಿಶ್ವಕಪ್ ಗೆದ್ದ ಅಂಡರ್-19 ಆಟಗಾರರ ಹೆಸರು ಕೂಡ ಹರಾಜು ಪಟ್ಟಿಯಲ್ಲಿದೆ.
ಇನ್ನು ವಿದೇಶಿ ಆಟಗಾರರಾದ ಕ್ರಿಸ್ ಗೇಲ್ (ವಿಂಡೀಸ್), ಜೋ ರೂಟ್, ಬೆನ್ ಸ್ಟೋಕ್ಸ್ (ಇಂಗ್ಲೆಂಡ್), ಕೈಲ್ ಜೆಮಿಸನ್(ನ್ಯೂಜಿಲೆಂಡ್), ಸ್ಯಾಮ್ ಕರನ್, ಮಿಚೆಲ್ ಸ್ಟಾರ್ಕ್ ಅವರು ಈ ಬಾರಿ ಹರಾಜಿನಲ್ಲಿಲ್ಲ.
ಮಹೇಂದ್ರ ಸಿಂಗ್ ಧೋನಿ (ಸಿಎಸ್ ಕೆ), ವಿರಾಟ್ ಕೊಹ್ಲಿ (ಆರ್ ಸಿಬಿ). ಕೆ.ಎಲ್ ರಾಹುಲ್. ಹಾರ್ದಿಕ್ ಪಾಂಡ್ಯಾ ಸೇರಿ ಹಲವರನ್ನು ತಂಡಗಳು ಉಳಿಸಿಕೊಂಡಿವೆ.
ಹರಾಜಿನಲ್ಲಿ ಪ್ರತಿ ತಂಡ ಗರಿಷ್ಠ 67.5 ಕೋಟಿ ರೂ. ಹಣವನ್ನು ಆಟಗಾರರ ಮೇಲೆ ಬಿಡ್ ಮಾಡಬಹುದಾಗಿದ್ದು, ತಂಡದಲ್ಲಿ ಕನಿಷ್ಠ 18 ಆಟಗಾರರು ಹಾಗೂ ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದೆ.