ಹೊಸದಿಗಂತ ಡಿಜಿಟಲ್ ಡೆಸ್ಕ್
ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಪ್ರದರ್ಶನ ನೀಡಿದೆ. ಈ ವರೆಗೆ ತಾನಾಡಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ಕಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಅಮೊಘ ಬ್ಯಾಟಿಂಗ್ ಪ್ರದರ್ಶನ ತೋರಿ 210 ರನ್ ಕಲೆಹಾಕಿದರೂ ಬೌಲಿಂಗ್ ವೈಫಲ್ಯದಿಂದಾಗಿ ಗೆಲುವು ದಕ್ಕಲಿಲ್ಲ. ಎರಡನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ನೈಟ್ ರೈಡರ್ಸ್ ವಿರುದ್ಧದ ರೋಚಕ ಕದನದಲ್ಲಿ 3 ವಿಕೆಟ್ ಗಳಿಂದ ಗೆದ್ದುಬೀಗಿದೆ. ಈ ನಡುವೆ ಆರ್ಸಿಬಿ ಅಭಿಮಾನಿಗಳಿಗೆ ಬೇಸರದ ಸಂಗತಿಯೊಂದು ಎದುರಾಗಿದೆ. ತಂಡದ ಯುವ ಆಟಗಾರ ಕನ್ನಡಿಗ ಲವ್ನೀತ್ ಸಿಸೋಡಿಯಾ ಗಾಯದ ಕಾರಣದಿಂದ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಆರ್ಸಿಬಿ ʼದೇಸಿ ಸ್ಟಾರ್ʼ ಆಟಗಾರನೊಬ್ಬನನ್ನು ಕರೆತಂದಿದೆ.
ಮಧ್ಯಪ್ರದೇಶದ ಸ್ಫೋಟಕ ಆಟಗಾರ ರಜತ್ ಪಾಟಿದಾರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ ಆಡಿದ್ದ 28 ವರ್ಷದ ರಜತ್ ಪಾಟಿದಾರ್ ಭರವಸೆ ಮೂಡಿಸಿದ್ದರು. ತಂಡದ ಪರ ಮೂರನೇ ಕ್ರಮಾಂಕದಲ್ಲಿ 4 ಪಂದ್ಯಗಳನ್ನಾಡಿ ಒಟ್ಟು 71 ರನ್ ಕಲೆಹಾಕಿದ್ದರು.
ಮತ್ತೊಂದೆಡೆ ದೇಶೀಯ ಕ್ರಿಕೆಟ್ನಲ್ಲಿ ಪಾಟಿದಾರ್ ಪ್ರದರ್ಶನ ಅತ್ಯುತ್ತಮವಾಗಿದೆ. 31 ಟಿ20 ಪಂದ್ಯಗಳಲ್ಲಿ ಏಳು ಅರ್ಧಶತಕಗಳೊಂದಿಗೆ 861 ರನ್ ಗಳಿಸಿದ್ದಾರೆ. ಬಲಗೈ ಬ್ಯಾಟ್ಸ್ ಮನ್ 138.64 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಆರ್ಸಿಬಿ ಏ.5 ರಂದು ನಡೆಯಲಿರುವ ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸವಾಲು ಎದುರಿಸಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ