Friday, December 19, 2025

IPL 2026 ಮೆಗಾ ಹರಾಜು: 4 ಸ್ಟಾರ್ ಆಟಗಾರರು ಅನ್ಸೋಲ್ಡ್! ಮೊದಲ ಸುತ್ತಿನ ಹೈಲೈಟ್ಸ್ ಹೀಗಿದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 19ರ ಬಹುನಿರೀಕ್ಷಿತ ಹರಾಜು ಪ್ರಕ್ರಿಯೆಯು ರೋಚಕವಾಗಿ ಆರಂಭಗೊಂಡಿದೆ. ಮೊದಲ ಸುತ್ತಿನಲ್ಲಿ ಒಟ್ಟು ಆರು ಪ್ರಮುಖ ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ, ಕೇವಲ ಇಬ್ಬರು ಆಟಗಾರರಿಗೆ ಮಾತ್ರ ಬಿಡ್ಡಿಂಗ್ನಲ್ಲಿ ಯಶಸ್ಸು ಸಿಕ್ಕಿದ್ದು, ಉಳಿದ ನಾಲ್ವರು ಸ್ಟಾರ್ ಆಟಗಾರರು ಅನ್​ಸೋಲ್ಡ್ ಆಗಿ ಉಳಿದಿರುವುದು ಅಚ್ಚರಿ ಮೂಡಿಸಿದೆ.

ಆಸ್ಟ್ರೇಲಿಯಾದ ಸ್ಟಾರ್ ಆಲ್​ರೌಂಡರ್ ಕ್ಯಾಮರೋನ್ ಗ್ರೀನ್ ಮೊದಲ ಸುತ್ತಿನ ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದರು. ಗ್ರೀನ್ ಅವರನ್ನು ಖರೀದಿಸಲು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ KKR ಫ್ರಾಂಚೈಸಿ ಬರೋಬ್ಬರಿ 25.20 ಕೋಟಿ ಮೊತ್ತಕ್ಕೆ ಗ್ರೀನ್ ಅವರನ್ನು ಖರೀದಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ದಾಖಲೆ ಬರೆದಿದೆ.

ದಾಖಲೆ ಮೊತ್ತಕ್ಕೆ ಗ್ರೀನ್ ಹರಾಜಾದ ಬಳಿಕ, ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಅವರ ಸರದಿ. ಐಪಿಎಲ್ 2025 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದ ಮಿಲ್ಲರ್ ಅವರನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಅವರ ಮೂಲ ಬೆಲೆ 2 ಕೋಟಿಗೆ ಖರೀದಿಸಿದೆ.

ಮೊದಲ ಸುತ್ತಿನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ನಾಲ್ವರು ಆಟಗಾರರು ಅನ್​ಸೋಲ್ಡ್ ಆಗಿ ಉಳಿದಿದ್ದಾರೆ. ನ್ಯೂಜಿಲೆಂಡ್‌ನ ಸ್ಫೋಟಕ ಆರಂಭಿಕ ಡೆವೊನ್ ಕಾನ್ವೆ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ.

ಅದೇ ರೀತಿ, ಯುವ ಆಸ್ಟ್ರೇಲಿಯನ್ ದಾಂಡಿಗ ಜೇಕ್​ ಫ್ರೇಸರ್ ಮೆಕ್​ಗುರ್ಕ್​, ಟೀಮ್ ಇಂಡಿಯಾದ ಪ್ರತಿಭಾನ್ವಿತ ದಾಂಡಿಗ ಪೃಥ್ವಿ ಶಾ ಮತ್ತು ದೇಶೀಯ ಕ್ರಿಕೆಟ್‌ನ ಸ್ಟಾರ್ ಸರ್ಫರಾಝ್ ಖಾನ್ ಕೂಡ ಮೊದಲ ಸುತ್ತಿನಲ್ಲಿ ಖರೀದಿಯಾಗದೇ ಉಳಿದಿದ್ದಾರೆ. ಈ ನಾಲ್ವರು ಆಟಗಾರರು ಮುಂದಿನ ಸುತ್ತುಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ.

ಡೆವೊನ್ ಕಾನ್ವೆ: ಅನ್ಸೋಲ್ಡ್ (ಮೂಲ ಬೆಲೆ 2 ಕೋಟಿ)

ಜೇಕ್​ ಫ್ರೇಸರ್ ಮೆಕ್​ಗುರ್ಕ್​: ಅನ್ಸೋಲ್ಡ್ (ಮೂಲ ಬೆಲೆ 2 ಕೋಟಿ)

ಪೃಥ್ವಿ ಶಾ: ಅನ್ಸೋಲ್ಡ್ (ಮೂಲ ಬೆಲೆ 75 ಲಕ್ಷ)

ಸರ್ಫರಾಝ್ ಖಾನ್: ಅನ್ಸೋಲ್ಡ್ (ಮೂಲ ಬೆಲೆ 75 ಲಕ್ಷ)

error: Content is protected !!