March 31, 2026
Tuesday, March 31, 2026
spot_img

IPL | ಜಡ್ಡು ಮಾರಕ ದಾಳಿಗೆ ಸಿಎಸ್‌ಕೆ ತತ್ತರ: ವಿಕೆಟ್ ಕಿತ್ತು ಗನ್ ಶಾಟ್ ಸೆಲೆಬ್ರೇಷನ್ ಮಾಡಿದ ಜಡೇಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೌಹಾಟಿಯಲ್ಲಿ ನಡೆದ ಐಪಿಎಲ್ 2026ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದ ರವೀಂದ್ರ ಜಡೇಜಾ, ಮಾಜಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಗಮನ ಸೆಳೆದರು.

ವರ್ಷಗಳ ಕಾಲ ಸಿಎಸ್‌ಕೆಯ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದ ಜಡೇಜಾ, ಈ ಬಾರಿ ಎದುರಾಳಿ ತಂಡದ ವಿರುದ್ಧವೇ ಮಿಂಚಿ ಅಭಿಮಾನಿಗಳ ಗಮನವನ್ನು ತನ್ನತ್ತ ಸೆಳೆದರು. ಎಂಎಸ್ ಧೋನಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಸಿಎಸ್‌ಕೆ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿತು. ಕೇವಲ 14 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡ ತಂಡ, ನಂತರ 51 ರನ್‌ಗೆ ಐದು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕ ಸಂಪೂರ್ಣ ಕುಸಿದ ಕಾರಣ ಸಿಎಸ್‌ಕೆಗೆ ದೊಡ್ಡ ಹಿನ್ನಡೆಯಾಯಿತು.

ಎಂಟನೇ ಓವರ್‌ನಲ್ಲಿ ಬೌಲಿಂಗ್ ಆರಂಭಿಸಿದ ಜಡೇಜಾ ಮೊದಲೇ ಪರಿಣಾಮ ಬೀರಿದರು. ತಮ್ಮ ಮೊದಲ ಓವರ್‌ನ ಎರಡನೇ ಚೆಂಡಿನಲ್ಲೇ ಸರ್ಫರಾಜ್ ಖಾನ್ ಅವರನ್ನು ಔಟ್ ಮಾಡಿ ಸಿಎಸ್‌ಕೆಗೆ ಮತ್ತೊಂದು ಆಘಾತ ನೀಡಿದರು. 12 ಚೆಂಡುಗಳಲ್ಲಿ 17 ರನ್ ಗಳಿಸಿದ್ದ ಸರ್ಫರಾಜ್ ಪೆವಿಲಿಯನ್ ಸೇರಿದರು.

ಇದನ್ನೂ ಓದಿ:

ನಂತರ ಕ್ರೀಸ್‌ಗೆ ಬಂದ ಶಿವಂ ದುಬೆ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಜಡೇಜಾ ವಿರುದ್ಧ ಒಂದು ಸಿಕ್ಸರ್ ಕೂಡ ಸಿಡಿಸಿದರು. ಆದರೆ ಅದೇ ಓವರ್‌ನಲ್ಲಿ ಮತ್ತೊಮ್ಮೆ ದೊಡ್ಡ ಶಾಟ್ ಪ್ರಯತ್ನಿಸಿದ ದುಬೆ, ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಒಂದೇ ಓವರ್‌ನಲ್ಲಿ ಎರಡು ಪ್ರಮುಖ ವಿಕೆಟ್ ಪಡೆದ ಜಡೇಜಾ ಪಂದ್ಯವನ್ನು ರಾಜಸ್ಥಾನ್ ಪರ ತಿರುಗಿಸಿದರು.

ಮೂರು ಓವರ್‌ಗಳಲ್ಲಿ ಕೇವಲ 18 ರನ್ ನೀಡಿ ಎರಡು ವಿಕೆಟ್ ಪಡೆದ ಜಡೇಜಾ, ವಿಕೆಟ್ ನಂತರ ಗನ್ ಪೋಸ್‌ನಲ್ಲಿ ಸಂಭ್ರಮಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಜಿ ತಂಡದ ವಿರುದ್ಧ ಅವರ ಈ ಆಕ್ರೋಶಭರಿತ ಸಂಭ್ರಮ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !