ಹೊಸದಿಗಂತ ಡಿಜಿಟಲ್ ಡೆಸ್ಕ್:
17 ವರ್ಷಗಳಿಂದ ಆರ್‌ಸಿಬಿ ಫ್ಯಾನ್ಸ್ ಲಾಯಲ್ ಆಗಿದ್ದಾರೆ. ಒಂದೇ ಒಂದು ಟ್ರೋಫಿಗೋಸ್ಕರ ಹಪಹಪಿಸಿದ್ದಾರೆ. ಪ್ರತಿ ವರ್ಷದ ಐಪಿಎಲ್ ಆರಂಭದಿಂದ ಕಡೆಯವರೆಗೂ ಈ ಸಲ ಕಪ್ ನಮ್ದೇ ಎಂದು ಕೂಗಿದ್ದಾರೆ. ನೂರಾರು ಬಾರಿ ಪ್ರಾರ್ಥನೆ ಮಾಡಿದ್ದಾರೆ, ಕೋಟ್ಯಂತರ ಅಭಿಮಾನಿಗಳ ಕನಸು ನಿನ್ನೆ ನನಸಾಗಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳಿಂದ ಮಣಿಸಿದ ಆರ್‌ಸಿಬಿ ಚೊಚ್ಚಲ ಐಪಿಎಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 190 ರನ್ ಗಳಿಸಿತು. ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 43 ರನ್ ಗಳಿಸಿದರು. ಪಂಜಾಬ್ ಪರ ಕೈಲ್ ಜೇಮಿಸನ್ ಮತ್ತು ಅರ್ಶ್‌ದೀಪ್ ಸಿಂಗ್ ತಲಾ ಮೂರು ವಿಕೆಟ್ ಪಡೆದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 184 ರನ್‌ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ ಪರ ಶಶಾಂಕ್ ಸಿಂಗ್ ಅಜೇಯ 61 ರನ್ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ದೇಶಾದ್ಯಂತ ಆರ್‌ಸಿಬಿ ಗೆಲುವನ್ನು ಆಚರಣೆ ಮಾಡಲಾಗುತ್ತಿದೆ. ಮಧ್ಯರಾತ್ರಿಯೇ ರಸ್ತೆಗಳಲ್ಲಿ ಜನ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇಡೀ ದೇಶವೊಂದು ಒಗ್ಗಟ್ಟಾಗಿ ಆಚರಿಸಿದ ಹಬ್ಬದಲ್ಲಿ ನಿನ್ನೆಯ ಫೈನಲ್ ಮ್ಯಾಚ್ ಕೂಡ ಒಂದು!