April 13, 2026
Monday, April 13, 2026
spot_img

SRH vs RR | ಇಶಾನ್ ಕಿಶನ್ ಅಬ್ಬರಕ್ಕೆ ಬೆಚ್ಚಿದ ರಾಜಸ್ಥಾನ್: 217 ರನ್ ಟಾರ್ಗೆಟ್ ನೀಡಿದ ಹೈದರಾಬಾದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 21ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ರಾಜಸ್ಥಾನ್ ರಾಯಲ್ಸ್ ಎದುರು 217 ರನ್‌ಗಳ ಕಠಿಣ ಗುರಿ ನಿಗದಿಪಡಿಸಿದೆ. ಟಾಸ್ ಗೆದ್ದ ರಾಜಸ್ಥಾನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರೂ, ಎಸ್‌ಆರ್‌ಎಚ್ ಬ್ಯಾಟರ್‌ಗಳ ದಾಳಿಯನ್ನು ತಡೆಯಲು ಸಾಧ್ಯವಾಗಲಿಲ್ಲ.

ಆರಂಭದಲ್ಲೇ ದೊಡ್ಡ ಆಘಾತ ಎದುರಿಸಿದ ಹೈದರಾಬಾದ್, ಮೊದಲ ಎಸೆತದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡರು. ಜೋಫ್ರಾ ಆರ್ಚರ್ ಎಸೆತದಲ್ಲಿ ಅವರು ಗೋಲ್ಡನ್ ಡಕ್ ಆಗಿ ಪೆವಿಲಿಯನ್ ಸೇರಿದ್ರು. ಆದರೆ ಈ ಆರಂಭಿಕ ಹೊಡೆತದಿಂದ ತಂಡ ಕುಗ್ಗದೆ, ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ ಮೂಲಕ ಇನ್ನಿಂಗ್ಸ್‌ಗೆ ಜೀವ ತುಂಬಿದರು.

ಟ್ರಾವಿಸ್ ಹೆಡ್ ಜೊತೆ ಉತ್ತಮ ಜೊತೆಯಾಟ ಕಟ್ಟಿದ ಇಶಾನ್, ನಂತರ ಹೆನ್‌ರಿಚ್ ಕ್ಲಾಸೆನ್ ಜೊತೆಯಲ್ಲೂ ರನ್ ಮಳೆ ಸುರಿಸಿದರು. ಹೆಡ್ 18 ರನ್‌ಗಳಿಗೆ ಔಟ್ ಆದ ಬಳಿಕ ಕ್ಲಾಸೆನ್ 40 ರನ್‌ಗಳ ಚುರುಕಿನ ಆಟದಿಂದ ತಂಡದ ಮೊತ್ತವನ್ನು ವೇಗವಾಗಿ ಹೆಚ್ಚಿಸಿದರು. ಇಶಾನ್ ಕಿಶನ್ ಮಾತ್ರ ಶತಕದತ್ತ ದೌಡಾಯಿಸಿ 44 ಎಸೆತಗಳಲ್ಲಿ 91 ರನ್ ಸಿಡಿಸಿ ಪಂದ್ಯಕ್ಕೆ ತಿರುವು ನೀಡಿದರು.

ಇದನ್ನೂ ಓದಿ:

ಕೊನೆಯ ಓವರ್‌ಗಳಲ್ಲಿ ನಿತೀಶ್ ಕುಮಾರ್ ರೆಡ್ಡಿ 28 ಹಾಗೂ ಸಲೀಲ್ ಅರೋರಾ ಅಜೇಯ 24 ರನ್ ಗಳಿಸಿ ತಂಡವನ್ನು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್‌ಗಳ ಬೃಹತ್ ಮೊತ್ತಕ್ಕೆ ಕೊಂಡೊಯ್ದರು.

ರಾಜಸ್ಥಾನ್ ಪರ ಜೋಫ್ರಾ ಆರ್ಚರ್ ಎರಡು ವಿಕೆಟ್ ಪಡೆದು ಗಮನ ಸೆಳೆದರೆ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ ಮತ್ತು ರಿಯಾನ್ ಪರಾಗ್ ತಲಾ ಒಂದು ವಿಕೆಟ್ ಪಡೆದರು. ಇದೀಗ 217 ರನ್ ಗುರಿ ಬೆನ್ನಟ್ಟುವ ರಾಜಸ್ಥಾನ್ ಮೇಲೆ ಒತ್ತಡ ಹೆಚ್ಚಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !