ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ತೀವ್ರ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ ಇರಾನ್ ತನ್ನ ವಾಯುಪ್ರದೇಶವನ್ನು ಹಠಾತ್ ಬಂದ್ ಮಾಡಿರುವುದು ಭಾರತೀಯ ವಿಮಾನಯಾನ ಸೇವೆಗಳ ಮೇಲೆ ನೇರ ಪರಿಣಾಮ ಬೀರಿದೆ. ಈ ಬೆಳವಣಿಗೆಯ ಪರಿಣಾಮವಾಗಿ ಏರ್ ಇಂಡಿಯಾ ಅಮೆರಿಕಕ್ಕೆ ತೆರಳುತ್ತಿದ್ದ ಕನಿಷ್ಠ ಮೂರು ದೀರ್ಘದೂರದ ವಿಮಾನಗಳನ್ನು ರದ್ದುಗೊಳಿಸಿದ್ದು, ಯುರೋಪ್ ಮಾರ್ಗಗಳಲ್ಲೂ ವಿಳಂಬ ಸಂಭವಿಸುವ ಸಾಧ್ಯತೆ ಇದೆ ಎಂದು ವಿಮಾನಯಾನ ಮೂಲಗಳು ತಿಳಿಸಿವೆ.
ದೆಹಲಿಯಿಂದ ನ್ಯೂಯಾರ್ಕ್ ಹಾಗೂ ನ್ಯೂವಾರ್ಕ್‌ಗೆ ತೆರಳಬೇಕಿದ್ದ ಎರಡು ವಿಮಾನಗಳು ಮತ್ತು ಮುಂಬೈನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಒಂದು ವಿಮಾನ ಸೇವೆ ರದ್ದಾಗಿದೆ. ಸಾಮಾನ್ಯವಾಗಿ ಇರಾನ್ ವಾಯುಪ್ರದೇಶದ ಮೂಲಕ ಸಾಗುವ ಈ ಹಾರಾಟಗಳು ಈಗ ಪರ್ಯಾಯ ಮಾರ್ಗಗಳನ್ನು ಬಳಸಬೇಕಾದ ಅನಿವಾರ್ಯತೆಗೆ ಒಳಗಾಗಿವೆ. ಇದರಿಂದ ಹಾರಾಟದ ಅವಧಿ ಹೆಚ್ಚಾಗಿದ್ದು, ಕೆಲ ವಿಮಾನಗಳು ತಡೆರಹಿತವಾಗಿ ಅಮೆರಿಕ ತಲುಪಲು ಅಗತ್ಯವಿರುವ ಇಂಧನ ಸಾಮರ್ಥ್ಯ ಹೊಂದಿರದ ಸ್ಥಿತಿಗೂ ತಲುಪಿವೆ.
ಪ್ರಯಾಣಿಕರ ಸುರಕ್ಷತೆಯೇ ಮೊದಲ ಆದ್ಯತೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದ್ದು, ಇರಾನ್ ಮೇಲಿನ ಹಾರಾಟವನ್ನು ತಾತ್ಕಾಲಿಕವಾಗಿ ತಪ್ಪಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಮಾರ್ಗ ಬದಲಾವಣೆ ಸಾಧ್ಯವಾಗದ ಕೆಲವು ಸೇವೆಗಳನ್ನು ರದ್ದುಗೊಳಿಸಲಾಗುತ್ತಿದ್ದು, ಇದರಿಂದ ಉಂಟಾದ ಅಸೌಕರ್ಯಕ್ಕೆ ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ.
ಪಾಕಿಸ್ತಾನದ ವಾಯುಪ್ರದೇಶ ಈಗಾಗಲೇ ಮುಚ್ಚಿರುವ ಕಾರಣ, ಪಶ್ಚಿಮ ದೇಶಗಳಿಗೆ ಏರ್ ಇಂಡಿಯಾ ದೀರ್ಘ ಮಾರ್ಗಗಳನ್ನು ಬಳಸುತ್ತಿದೆ. ಇಂತಹ ಸಂದರ್ಭದಲ್ಲೇ ಇರಾನ್ ವಾಯುಪ್ರದೇಶ ಬಂದ್ ಆಗಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.


