ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.
ಭದ್ರತಾ ಕಾರಣಗಳು ಹಾಗೂ ಕೆಲವು ದೇಶಗಳ ವಾಯುಪ್ರದೇಶದ ಮೇಲಿನ ನಿರ್ಬಂಧಗಳಿಂದಾಗಿ ಒಟ್ಟು 17 ವಿಮಾನಗಳ ಹಾರಾಟ ರದ್ದುಗೊಂಡಿದೆ.
ಮಧ್ಯಪ್ರಾಚ್ಯದ ವಿವಿಧ ನಗರಗಳಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ 8 ವಿಮಾನಗಳು ಹಾಗೂ ಬೆಂಗಳೂರಿನಿಂದ ಹೊರಡಬೇಕಿದ್ದ 9 ವಿಮಾನಗಳು ಸೇವೆಯನ್ನು ಸ್ಥಗಿತಗೊಳಿಸಿವೆ. ಅಬುಧಾಬಿ, ರಿಯಾದ್, ಜೆದ್ದಾ, ದಮ್ಮಾಮ್, ದುಬೈ ಮತ್ತು ದೋಹಾ ಮಾರ್ಗಗಳಲ್ಲಿ ಸಂಚರಿಸುವ ವಿಮಾನಗಳು ಈ ನಿರ್ಧಾರದ ಪರಿಣಾಮವಾಗಿ ರದ್ದಾಗಿವೆ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.
ಇದನ್ನೂ ಓದಿ:
ಯುದ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಹಲವು ದೇಶಗಳು ತಮ್ಮ ವಾಯುಪ್ರದೇಶದಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿರುವುದರಿಂದ ವಿಮಾನಗಳ ವೇಳಾಪಟ್ಟಿಯಲ್ಲಿ ಅಡಚಣೆ ಉಂಟಾಗಿದೆ. ಇದರ ಪರಿಣಾಮವಾಗಿ ಮಧ್ಯಪ್ರಾಚ್ಯ ದೇಶಗಳಿಗೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರಿಗೆ ತಾತ್ಕಾಲಿಕ ಅಸೌಕರ್ಯ ಎದುರಾಗುವ ಸಾಧ್ಯತೆ ಇದೆ.
ಪ್ರಯಾಣಿಕರು ತಮ್ಮ ವಿಮಾನಗಳ ಹಾರಾಟದ ಮಾಹಿತಿ ಹಾಗೂ ವೇಳಾಪಟ್ಟಿಯನ್ನು ಸಂಬಂಧಿತ ಏರ್‌ಲೈನ್‌ಗಳ ಅಧಿಕೃತ ವೆಬ್‌ಸೈಟ್ ಅಥವಾ ವಿಮಾನ ನಿಲ್ದಾಣದ ಮಾಹಿತಿಯ ಮೂಲಕ ಮುಂಚಿತವಾಗಿ ಪರಿಶೀಲಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.



