ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ರಾಜಕಾರಣದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶೀತಲ ಸಮರ ಈಗ ಕೆಂಡದಂತಾಗಿದೆ. “ಇರಾನ್ ತನ್ನ ಮೇಲೆ ದಾಳಿಗೆ ಸಂಚು ರೂಪಿಸಿದರೆ, ಆ ದೇಶವನ್ನೇ ಭೂಪಟದಿಂದ ಅಳಿಸಿಹಾಕಲಾಗುವುದು” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ಇದಕ್ಕೆ ಪ್ರತಿಯಾಗಿ “ಅಮೆರಿಕವನ್ನೇ ಸುಟ್ಟು ಹಾಕುತ್ತೇವೆ” ಎಂದು ಇರಾನ್ ತಿರುಗೇಟು ನೀಡಿದ್ದು, ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಸ್ಫೋಟಕ ಹಂತಕ್ಕೆ ತಲುಪಿದೆ.
ನ್ಯೂಸ್ ನೇಷನ್‌ನ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಇರಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತನ್ನನ್ನು ಹತ್ಯೆ ಮಾಡಲು ಇರಾನ್ ಪ್ರಯತ್ನಿಸಿದರೆ, ಇರಾನ್ ಎಂಬ ದೇಶವೇ ಜಗತ್ತಿನ ಭೂಪಟದಲ್ಲಿ ಇಲ್ಲದಂತೆ ಮಾಡುವುದಾಗಿ ಎಚ್ಚರಿಸಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ‘ಅಸ್ವಸ್ಥ ವ್ಯಕ್ತಿ’ ಎಂದು ಕರೆದಿರುವ ಟ್ರಂಪ್, ಇರಾನ್‌ಗೆ ಈಗ ಹೊಸ ನಾಯಕತ್ವದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ತನ್ನ ವಿರುದ್ಧದ ಯಾವುದೇ ಸಂಚು ಕಂಡುಬಂದಲ್ಲಿ ಇರಾನ್ ಅನ್ನು ಸಂಪೂರ್ಣವಾಗಿ ನಾಶಪಡಿಸಲು ತಮ್ಮ ಸಲಹೆಗಾರರಿಗೆ ಈಗಾಗಲೇ ಸೂಚನೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಟ್ರಂಪ್ ಹೇಳಿಕೆಗೆ ಇರಾನ್ ಮಿಲಿಟರಿ ವಕ್ತಾರ ಜನರಲ್ ಅಬುಲ್ ಫಜಲ್ ಶೇಕರ್ಚಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ನಮ್ಮ ಸರ್ವೋಚ್ಚ ನಾಯಕ ಖಮೇನಿ ಅವರತ್ತ ಯಾರಾದರೂ ಕೆಟ್ಟ ದೃಷ್ಟಿ ಬೀರಿದರೆ, ನಾವು ಆ ಕೈಯನ್ನು ಕತ್ತರಿಸುವುದು ಮಾತ್ರವಲ್ಲ, ಇಡೀ ದೇಶವನ್ನೇ ಸುಟ್ಟು ಭಸ್ಮ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.


