October 17, 2026
Saturday, October 17, 2026
spot_img

ಭಾರತ ತಲುಪಿದ ಇರಾಕಿ ಕಚ್ಚಾ ತೈಲ ಹಡಗು: ಇರಾನ್ ಗುಂಡಿನ ದಾಳಿಗೆ ಹೆದರದೆ ಒಡಿಶಾ ಬಂದರು ಸೇರಿದ ಟ್ಯಾಂಕರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾಕ್‌ನಿಂದ ಸುಮಾರು 2 ಮಿಲಿಯನ್ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಹೊತ್ತು ತರುತ್ತಿದ್ದ ‘ಎಂಟಿ ಸನ್ಮಾರ್ ಹೆರಾಲ್ಡ್‌’ (MT Sanmar Herald) ತೈಲ ಟ್ಯಾಂಕರ್ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಗುಂಡಿನ ದಾಳಿ ನಡೆಸಿವೆ. ಈ ಸಂಘರ್ಷ ಪೀಡಿತ ಜಲಮಾರ್ಗದಲ್ಲಿ ನಡೆದ ದಾಳಿಯಿಂದ ಹಡಗಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆಯಾದರೂ, ಭಾರಿ ದುರಂತವೊಂದು ತಪ್ಪಿದಂತಾಗಿದೆ. ಹಡಗಿನಲ್ಲಿ ಇರಾಕ್‌ನ ಪ್ರಸಿದ್ಧ ‘ಬಸ್ರಾ ಮೀಡಿಯಂ’ ಮತ್ತು ‘ಬಸ್ರಾ ಹೆವಿ’ ಮಾದರಿಯ ಕಚ್ಚಾ ತೈಲವಿತ್ತು.

ಮಾರ್ಗ ಬದಲಿಸಿ ಭಾರತಕ್ಕೆ ಸುರಕ್ಷಿತ ಪ್ರವೇಶ

ಗುಂಡಿನ ದಾಳಿ ನಡೆದ ತಕ್ಷಣವೇ ಎಚ್ಚೆತ್ತ ಹಡಗಿನ ಕ್ಯಾಪ್ಟನ್ ಹಾಗೂ ಭದ್ರತಾ ಸಿಬ್ಬಂದಿ, ತಕ್ಷಣವೇ ಹಡಗಿನ ಪ್ರಯಾಣದ ಮಾರ್ಗವನ್ನು ಬದಲಾಯಿಸಿದರು. ಸಿಬ್ಬಂದಿ ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ತೈಲದ ಸುರಕ್ಷತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಯಾವುದೇ ರೀತಿಯ ಭದ್ರತಾ ಲೋಪಕ್ಕೆ ಆಸ್ಪದ ನೀಡದೆ, ಭಾರತೀಯ ಕರಾವಳಿಯತ್ತ ಹಡಗು ಯಶಸ್ವಿಯಾಗಿ ಮುನ್ನಡೆಯಿತು.

ಒಡಿಶಾದ ಪ್ಯಾರದೀಪ್ ಬಳಿ ಲಂಗರು

ಸದ್ಯ ಇರಾನ್ ದಾಳಿಯಿಂದ ಸಂಪೂರ್ಣವಾಗಿ ಪಾರಾಗಿರುವ ಈ ಬೃಹತ್ ತೈಲ ಟ್ಯಾಂಕರ್ ಒಡಿಶಾದ ಪ್ಯಾರದೀಪ್ (Paradip) ಬಂದರನ್ನು ಸುರಕ್ಷಿತವಾಗಿ ತಲುಪಿದೆ. ಪ್ರಸ್ತುತ ಹಡಗು ಒಡಿಶಾ ಕರಾವಳಿಯಿಂದ ಸುಮಾರು 22 ಕಿಲೋಮೀಟರ್ ದೂರದ ಸಮುದ್ರದಲ್ಲಿ ಲಂಗರು ಹಾಕಿದ್ದು, ಸಿಬ್ಬಂದಿ ಹಾಗೂ ತೈಲ ಸುರಕ್ಷಿತವಾಗಿದೆ ಎಂದು ವರದಿಗಳು ಖಚಿತಪಡಿಸಿವೆ. ಅಂತರರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆಯೂ ಭಾರತಕ್ಕೆ ತೈಲ ಸರಬರಾಜು ಸುಗಮವಾಗಿ ನಡೆದಿರುವುದು ಸಮಾಧಾನದ ಸಂಗತಿಯಾಗಿದೆ.

Must Read