ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷದ ಜನವರಿ 22ರಂದು ಐಆರ್ಸಿಟಿಸಿಯಿಂದ ಪ್ರಾರಂಭಿಸಲಾದ ರಾಮಾಯಣ ರೈಲು ಯಾತ್ರೆಗೆ ಚಾಲನೆ ನೀಡಿದ್ದರು. ಇದೀಗ ಈ ಯಾತ್ರೆಯ ಐದನೇ ವಿಶೇಷ ರೈಲಿನ ಪ್ರವಾಸ ಇದೇ ತಿಂಗಳಲ್ಲಿ ಆರಂಭವಾಗಲಿದ್ದು, ಈ ಪ್ರಯಾಣದ ಸಂಪೂರ್ಣ ಮಾಹಿತಿ ಇಲ್ಲಿದೆ…
ಈ ರಾಮಯಣ ಪ್ರವಾಸವನ್ನು ಯಾತ್ರಿಕರ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ತಮ್ಮ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. 3 ಟೈರ್ ಎಸಿ ದರ್ಜೆಯ ಕ್ಯಾಬಿನ್‌ಗೆ ಪ್ರತಿ ವ್ಯಕ್ತಿಗೆ 1,17,975 ರೂ., 2 ಟೈರ್ ಎಸಿ ದರ್ಜೆಯ ಕ್ಯಾಬಿನ್‌ಗೆ 1,40,120 ರೂ., 1 ಎಸಿ ದರ್ಜೆಯ ಕ್ಯಾಬಿನ್‌ಗೆ 1,66,380 ರೂ. ಮತ್ತು 1AC ಕಪಲ್‌ಗೆ 1,79,515 ರೂ. ವೆಚ್ಚವಾಗುತ್ತದೆ.
ಯಾತ್ರಾರ್ಥಿಗಳ ಆಯ್ಕೆಗೆ ಅನುಸಾರ 3 ಸ್ಟಾರ್ ವರ್ಗದ ಹೋಟೆಲ್‌ಗಳಲ್ಲಿ ವಸತಿ, ಎಲ್ಲಾ ಊಟಗಳು, ಲಗೇಜುಗಳ ವರ್ಗಾವಣೆ, ಎಸಿಕೋಚ್ಗಳ ದೃಶ್ಯ ವೀಕ್ಷಣೆ, ಪ್ರಯಾಣ ವಿಮೆ ಮತ್ತು ಐಆರ್‌ಸಿಟಿಸಿ ಟೂರ್ ಮ್ಯಾನೇಜರ್‌ಗಳ ಸೇವೆಗಳನ್ನು ಒದಗಿಸಲಾಗಿದೆ.
ಇತ್ತೀಚೆಗೆ ಐಆರ್‌ಸಿಟಿಸಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಪ್ರಕಾರ, ಈ ಪ್ರವಾಸವು ಜುಲೈ 25 ರಂದು ದೆಹಲಿ ಸಫ್ದರ್ ಜಂಗ್ ರೈಲು ನಿಲ್ದಾಣದಿಂದ ಪ್ರಾರಂಭವಾಗಲಿದ್ದು, ಆಧುನಿಕ ಸೌಲಭ್ಯದ ಭಾರತ್ ಗೌರವ್ ಡಿಲಕ್ಸ್ ಎಸಿ ಪ್ರವಾಸಿ ರೈಲಿನಲ್ಲಿ ಯಾತ್ರಿಕರು ಪ್ರಯಾಣ ಕೈಗೊಳ್ಳಲಿದ್ದಾರೆ. ರೈಲಿನಲ್ಲಿ ಎರಡು ರೆಸ್ಟೋರೆಂಟ್‌ಗಳು, ಆಧುನಿಕ ಅಡುಗೆಮನೆ, ಬೋಗಿಗಳಲ್ಲಿ ಶವರ್ ಕ್ಯುಬಿಕಲ್‌ಗಳು, ಸೆನ್ಸಾರ್ ಆಧಾರಿತ ವಾಶ್‌ರೂಮ್ ಕಾರ್ಯಗಳು, ಫುಟ್ ಮಸಾಜರ್ ಸೇರಿದಂತೆ ಹಲವಾರು ಅದ್ಭುತ ವೈಶಿಷ್ಟ್ಯಗಳಿವೆ. ಸಂಪೂರ್ಣ ಬೋಗಿಗಳು ಏರ್ ಕಂಡಿಷನ್ ಆಗಿದ್ದು, ಸಿಸಿಟಿವಿ ಕ್ಯಾಮೆರಾ ಭದ್ರತೆ, ಪ್ರತಿ ಕೋಚ್ನಲ್ಲಿ ಭದ್ರತಾ ಸಿಬ್ಬಂದಿ ರಕ್ಷಣೆಗೆ ಇರಲಿದ್ದಾರೆ.
17 ದಿನಗಳ ಈ ಪ್ರವಾಸವೂ ಮೊದಲಿಗೆ ಅಯೋಧ್ಯೆಗೆ ತೆರಳಿ ಶ್ರೀ ರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್ ಗರ್ಹಿ ಮತ್ತು ರಾಮ್ ಕಿ ಪೈಡಿಗೆ ತೆರಳಲಿದೆ. ಬಳಿಕ ನಂದಿ ಗ್ರಾಮದಲ್ಲಿರುವ ಭಾರತ್ ಮಂದಿರ. ನಂತರದ ತಾಣ ಬಿಹಾರದ ಸೀತಾಮರ್ಹಿಯಾಗಿದ್ದು, ಅಲ್ಲಿ ಪ್ರವಾಸಿಗರು ಸೀತಾಜಿಯ ಜನ್ಮಸ್ಥಳ ಮತ್ತು ಜನಕಪುರ (ನೇಪಾಳ) ದಲ್ಲಿರುವ ರಾಮ ಜಾನಕಿ ದೇವಾಲಯಕ್ಕೆ ಯಾತ್ರಿಕರು ಭೇಟಿ ನೀಡಲಿದ್ದಾರೆ.
ಮುಂದಿನ ಎರಡು ದಿನ ಯಾತ್ರಿಕರು, ರಸ್ತೆ ಮಾರ್ಗದ ಮೂಲಕ ಪ್ರಯಾಗ, ಶೃಂಗೇರ್‌ಪುರ ಮತ್ತು ಚಿತ್ರಕೂಟಕ್ಕೆ ಕರೆದೊಯ್ಯಲಾಗುವುದು, ಅಲ್ಲಿ ರಾತ್ರಿ ವಾಸ್ತವ್ಯಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ಬಳಿಕ ಚಿತ್ರಕೂಟದಿಂದ ರೈಲು ಮಹಾರಾಷ್ಟ್ರದ ಉತ್ತರ ಭಾಗದ ಕಡೆಗೆ ಸಾಗಲಿದ್ದು, ನಾಸಿಕ್‌ನಲ್ಲಿ ರೈಲು ನಿಲ್ಲಲಿದ್ದು, ಅಲ್ಲಿಂದ ತ್ರ್ಯಂಬಕೇಶ್ವರ ದೇವಸ್ಥಾನ ಮತ್ತು ಪಂಚವಟಿಗೆ ಭೇಟಿ ಸಾಗಲಿದೆ.
ಮರುದಿನ ಕಿಷ್ಕಿಂದಾನಗರ ಎಂದು ನಂಬಲಾಗಿರುವ ಹಂಪಿಗೆ ಪ್ರಯಾಣ ಸಾಗಲಿದೆ. ಈ ಕಿಷ್ಕಿಂದೆ ಹನುಮಂತನ ಜನ್ಮಸ್ಥಳ ಎಂದು ಪುರಾಣಗಳು ಹೇಳುತ್ತವೆ. ಬಳಿಕ ವಿಠ್ಠಲ ಮತ್ತು ವಿರೂಪಾಕ್ಷ ದೇವಾಲಯದದ ಸುತ್ತಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮರು ದಿನ ರಾಮೇಶ್ವರಂಗೆ ತೆರಳಲಿರುವ ರೈಲು ಅಲ್ಲಿ ಯಾತ್ರಿಕರು ರಾಮನಾಥಸ್ವಾಮಿ ದೇಗುಲ ಮತ್ತು ಧನುಷ್ಕೋಟಿಯ ವಿಹಂಗಮ ನೋಟವನ್ನು ವೀಕ್ಷಿಸಲಿದ್ದಾರೆ. 17ನೇ ದಿನ ರೈಲು ದೆಹಲಿಗೆ ವಾಪಸ್ ಆಗಲಿದೆ.