September 28, 2026
Monday, September 28, 2026
spot_img

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ? ಪ್ರಹ್ಲಾದ್ ಜೋಶಿ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ತೀವ್ರ ಹಳಿ ತಪ್ಪಿದ್ದು, ನಿಯಮಾನುಸಾರ ನಡೆಯುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ನಿಯಮಗಳನ್ನು ಗಾಳಿಗೆ ತೂರಿ, ಸಾಮೂಹಿಕವಾಗಿ ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗುತ್ತಿರುವುದು ತಪ್ಪು ವಿಧಾನ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದೇ ಕಡೆ 50 ಫಾರ್ಮ್ ವಿತರಣೆ: ಸಾಕ್ಷ್ಯ ಸಮೇತ ವಾಗ್ದಾಳಿ

ನಗರದ ವಾರ್ಡ್ ನಂಬರ್ 69, ಬೂತ್ ನಂಬರ್ 116 ರ ವ್ಯಾಪ್ತಿಯಲ್ಲಿ ಕೇವಲ ಮೂರು ಕುಟುಂಬಗಳಿಗೆ ಬರೋಬ್ಬರಿ 50 ಫಾರ್ಮ್‌ಗಳನ್ನು ಹಂಚಿಕೆ ಮಾಡಿರುವ ಉದಾಹರಣೆಯನ್ನು ನೀಡಿದ ಸಚಿವರು, ಈ ಅಕ್ರಮದ ವಿರುದ್ಧ ಬೂತ್ ಮಟ್ಟದ ಏಜೆಂಟರು (BLA) ಆಕ್ಷೇಪ ಎತ್ತಿದರೂ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ಸುಪ್ರೀಂ ಕೋರ್ಟ್ ನಿಯಮಗಳ ಉಲ್ಲಂಘನೆ

“ಮರಣ ಹೊಂದಿದವರು, ಬೇರೆಡೆಗೆ ಸ್ಥಳಾಂತರಗೊಂಡವರು ಮತ್ತು ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಿಂದ ಪತ್ತೆಹಚ್ಚಿ ತೆಗೆದುಹಾಕಲು ಸುಪ್ರೀಂ ಕೋರ್ಟ್ ನಿರ್ದೇಶನದಂತೆ SIR ಪ್ರಕ್ರಿಯೆ ನಡೆಸಬೇಕು. ಆದರೆ, ಇಲ್ಲಿ ಕೇವಲ ಸಾಮೂಹಿಕವಾಗಿ ಫಾರ್ಮ್ ಭರ್ತಿ ಮಾಡುವ ಕೆಲಸ ನಡೆಯುತ್ತಿದೆ” ಎಂದು ಜೋಶಿ ಆಕ್ರೋಶ ಹೊರಹಾಕಿದ್ದಾರೆ.

ಈ ಇಡೀ ಪ್ರಕ್ರಿಯೆಯಲ್ಲಿ ಕಂಡುಬಂದಿರುವ ಲೋಪದೋಷಗಳು ಹಾಗೂ ಅಕ್ರಮಗಳ ಕುರಿತು ಶೀಘ್ರದಲ್ಲೇ ಬಿಜೆಪಿ ಪ್ರಮುಖ ನಾಯಕರೊಂದಿಗೆ ಚರ್ಚಿಸಿ, ಮುಂದಿನ ಕಾನೂನಾತ್ಮಕ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.

Must Read