ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೃದಯಾಘಾತಕ್ಕೆ ಕೋವಿಡ್ ಕಾರಣವಲ್ಲ ಎಂದು ತಜ್ಞರ ಸಮಿತಿ ನೀಡಿದ ವರದಿ ಹಿನ್ನೆಲೆಯಲ್ಲಿ, “ಹೃದಯಾಘಾತಕ್ಕೆ ಲಸಿಕೆ ಕಾರಣವಿರಬಹುದು” ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಹೇಳಿಕೆ ಮೂಲಕ ಸಿದ್ದರಾಮಯ್ಯ ದೇಶದ ವಿಜ್ಞಾನಿಗಳಿಗೂ, ಲಸಿಕೆ ಮೇಲಿನ ವಿಶ್ವಾಸಕ್ಕೂ ಧಕ್ಕೆ ತಂದಿದ್ದಾರೆ ಎಂದು ದೂರಿಸಿದರು.
ಪ್ರಪಂಚದಾದ್ಯಂತ ಕಾಟ ನೀಡಿದ ಕೋವಿಡ್ ಅನ್ನು ನಿಭಾಯಿಸುವಲ್ಲಿ ಪ್ರಧಾನಿ ಮೋದಿ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿತು. ಮೊದಲೇ ಹಬ್ಬಿದ ಕೋವಿಡ್ ವಿರುದ್ಧ ಭಾರತದಲ್ಲಿ ಲಸಿಕೆ ತಯಾರಿ ಆರಂಭಿಸಿ, ತಕ್ಷಣವೇ ಅನುದಾನ ಬಿಡುಗಡೆ ಮಾಡಲಾಯಿತು. ಈ ಲಸಿಕೆಯನ್ನು ಸಿದ್ದರಾಮಯ್ಯ ಅವರೂ ಪಡೆದುಕೊಂಡಿದ್ದಾರೆ. ವಿದೇಶಿ ಲಸಿಕೆ ಹಾಕಿಸಿಕೊಂಡವರಲ್ಲ. ಈ ವೇಳೆ ಅವರು ನೀಡಿರುವ ಲಸಿಕೆ ಕುರಿತ ಬೇಜವಾಬ್ದಾರಿ ಹೇಳಿಕೆ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರು ಈ ಹೇಳಿಕೆಯನ್ನು ನೀಡುವುದರಿಂದ ನಮ್ಮ ದೇಶದ ಔಷಧ, ಲಸಿಕೆಗಳ ಮೇಲೆ ವಿಶ್ವಾಸ ಕುಂಠಿತವಾಗುತ್ತದೆ. ವಿದೇಶಗಳಲ್ಲಿ ಭಾರತ ನಿರ್ಮಿತ ಲಸಿಕೆ ಮಾರಾಟವಾಗುವ ಬಗ್ಗೆಯೂ ಅನುಮಾನ ಸೃಷ್ಟಿಸುತ್ತವೆ. ಇದು ಭಾರತದ ವಿಜ್ಞಾನ ಕ್ಷೇತ್ರಕ್ಕೂ ನಷ್ಟ ಉಂಟುಮಾಡುತ್ತದೆ. ಹೀಗಾಗಿ ಅವರು ತಕ್ಷಣವೇ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.
ಸಿದ್ದರಾಮಯ್ಯ ಅವರನ್ನು ಎಐಸಿಸಿ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿ ನೇಮಿಸಿದ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಜೋಶಿ, ಇಲ್ಲಿ ಸರಿಯಾಗಿ ವ್ಯವಸ್ಥೆ ನಡೆಸಲು ಸಾಧ್ಯವಾಗುತ್ತಿಲ್ಲ. ಕೇಂದ್ರ ರಾಜಕೀಯದಲ್ಲೇನು ಸಾಧಿಸುತ್ತಾರೆ? ಇದು ಪಕ್ಷದ ಹೈಕಮಾಂಡ್ ಅವರ ಮೇಲೆ ನಂಬಿಕೆಯನ್ನು ಕಳೆದುಕೊಂಡಿರುವ ಸಂಕೇತ. ದೆಹಲಿಗೆ ಕರೆಸಿ ಇಲ್ಲಿನ ಸ್ಥಾನ ಖಾಲಿ ಮಾಡಿಸುವ ಸಂಚಿನ ಭಾಗವೇ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.